ವಿದ್ಯಾರ್ಥಿಗಳಲ್ಲಿ ಅಧ್ಯಯನ ಶೀಲತೆ ನಿರಂತರವಾಗಿರಲಿ ಡಾ. ಸೂರಜ ಜೈನ್

ವಿದ್ಯಾರ್ಥಿಗಳಲ್ಲಿ ಅಧ್ಯಯನ ಶೀಲತೆ ನಿರಂತರವಾಗಿರಲಿ ಡಾ. ಸೂರಜ ಜೈನ್ May the spirit of study continue among students, Dr. Suraj Jain


ಧಾರವಾಡ  16: ಜನತಾ ಶಿಕ್ಷಣ ಸಮಿತಿ ಕೇವಲ ಧಾರವಾಡ ಅಷ್ಟೇ ಅಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ  ಹೆಸರುವಾಸಿಯಾದ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು. ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಜೆ.ಎಸ್‌.ಎಸ್‌. ಎಂ.ಸಿ.ಎ. ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ಸೂರಜ್ ಜೈನ್ ಹೇಳಿದರು. 

  ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಅಧ್ಯಯನ ಸಂಸ್ಥೆ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಪೂರ್ವ ತರಬೇತಿ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಜನತಾ ಶಿಕ್ಷಣ ಸಮಿತಿಯ 25ನೇ ಅಂಗ ಸಂಸ್ಥೆಯಾಗಿ ವಿದ್ಯಾರ್ಥಿಗಳ ಸವಾಂರ್ಗೀಣ ಅಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ನೀಡುತ್ತ ಮುನ್ನಡೆಯುತ್ತಿದೆ. ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆ ಮತ್ತು ವಿವಿಧ ಸರ್ಟಿಫಿಕೆಟ್ ಕೋರ್ಸ್‌, ಸ್ಪೋಕನ್ ಇಂಗ್ಲೀಷ, ರಿಸರ್ಚ ಮೆಥಡಾಲಜಿ, ಕ್ಲೌಡ್ ಕಂಪ್ಯೂಟಿಂಗ್, ಪ್ಲೇಸ್ ಮೆಂಟ್, ಜಾಬ್ ಓರಿಯಂಟೆಡ್ ಪ್ರೊಗ್ರಾಮ್ ಹೀಗೆ ಅನೇಕ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರಬುನಾದಿ ಕಲ್ಪಿಸಲಾಗುತ್ತಿದೆ. 

ಸಂಸ್ಥೆಯ ಮುಖಾಂತರ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ  ಉದ್ಯೋಗ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಪರಿಪೂರ್ಣ  ಕೌಶಲ್ಯಗಳು ಅಗತ್ಯ. ಅಂತಹ ಕೌಶಲ್ಯ ಬೆಳವಣಿಗೆ ಇಂತಹ ಶಿಬಿರಗಳಿಂದ ಸಿಗಲಿದೆ.  ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ವಿದ್ಯಾರ್ಥಿಗಳ ಹಿತಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ರಾಜ್ಯದ ವಿವಿಧೆಡೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಿ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವುದು ಹರ್ಷ ತಂದಿದೆ.

ಈಗ  ಎರಡು ದಿನಗಳ ಕಾಲ ನಡೆಯಲಿರುವ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಪೂರ್ವ ತರಬೇತಿ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಗಳು, ಕಾರ​‍್ೊರೇಟ್ ಟ್ರೇನರ್ ಶ್ರೀ ರಮನ್ ವೆಂಕಟ್ ಅವರಿಂದ ನಡೆಯಲಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಕಾರ್ಯಾಗಾರದಲ್ಲಿ ಭಾಗಿಯಾಗಿ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಿರಿ. ಅಧ್ಯಯನ ಶೀಲತೆ ನಿರಂತರವಾಗಿರಲಿ. ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಂಡು ಸಾಧಕರಾಗಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭಕೋರಿದರು. 

ತರಬೇತುದಾರರಾದ ರಮಣಿ ವೆಂಕಟ್ ಮಾತನಾಡಿ ನಿರಂತರ ಪ್ರಯತ್ನ ಮತ್ತು ಅವಕಾಶಗಳು ಇವು ವಿದ್ಯಾರ್ಥಿಗಳ  ಯಶಸ್ವಿ ಜೀವನಕ್ಕೆ ಬೇಕಾದ ಅತ್ಯಂತ ಮಹತ್ವ ಗುಣಗಳಾಗಿವೆ.  ಪ್ರಯತ್ನ ಮತ್ತು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಅದ್ಭುತ ಯಶಸ್ಸು ನಿಮ್ಮದಾಗುತ್ತದೆ.  ಲಲಿತಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಮಂಜುನಾಥ ಪೂಜಾರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಬಾಹುಬಲಿ ಚಿವಟೆ ನಿರೂಪಿಸಿದರು. ಡಾ. ಬಸವರಾಜ ಗೌಡನ್ನವರ ವಂದಿಸಿದರು. ಪ್ರೊ. ಮಂಜುಳಾ ಕಲ್ಮಠ ಇದ್ದರು.