ಪೊಲೀಸ್ ಹುತಾತ್ಮರ ಸ್ಮರಣೆ ನಿರಂತರವಾಗಿರಲಿ : ಮಾಯಣ್ಣ

ಪೊಲೀಸ್ ಹುತಾತ್ಮರ ಸ್ಮರಣೆ ನಿರಂತರವಾಗಿರಲಿ : ಮಾಯಣ್ಣ May the memory of police martyrs live on: Mayanna

ಪೊಲೀಸ್ ಹುತಾತ್ಮರ ಸ್ಮರಣೆ ನಿರಂತರವಾಗಿರಲಿ : ಮಾಯಣ್ಣ

ಕಾರವಾರ 21: ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಪೊಲೀಸ್ ಹುತಾತ್ಮರನ್ನು ಒಂದು ದಿನ ಮಾತ್ರ ನೆನೆಯದೆ , ಪ್ರತೀ ದಿನ ನೆನೆಯುವಂತಾಗಬೇಕು ಎಂದು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಯಣ್ಣ ಬಿ.ಎಲ್, ಹೇಳಿದರು. 

 ಅವರು ಮಂಗಳವಾರ ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ, ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ  ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ದೇಶದ ಹೊರಗಿನ ಬಾಹ್ಯ ಶಕ್ತಿಗಳಿಂದ ದೇಶವನ್ನು ಸೇನಾಪಡೆಗಳು ರಕ್ಷಿಸುತ್ತಿದ್ದು, ದೇಶದ ಆಂತರಿಕ ಭದ್ರತೆಯನ್ನು ಪೊಲೀಸ್ ಪಡೆ ನಿರಂತರವಾಗಿ ರಕ್ಷಿಸುತ್ತಿದ್ದು, ದೇಶದ ನಾಗರೀಕರು ಪೊಲೀಸರ ತ್ಯಾಗ ಬಲಿದಾನವನ್ನು ಪ್ರತಿದಿನ ನೆನೆಯಬೇಕು ಎಂದರು.ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿದಂತೆ ದೇಶದಲ್ಲಿ ಒಟ್ಟು 191 ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗಿದ್ದು , ಈ ಎಲ್ಲಾ ಹುತಾತ್ಮರ ಹೆಸರುಗಳನ್ನು ವಾಚಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್‌. , ಈ ಎಲ್ಲಾ ಸಿಬ್ಬಂದಿಗಳ ಆತ್ಮಕ್ಕೆ ಗೌರವವನ್ನು ಸಲ್ಲಿಸುತ್ತಾ, ಅವರ ಕುಟುಂಬ ವರ್ಗಕ್ಕೆ ದು:ಖ ಸಹಿಸುವ ಶಕ್ತಿಯಲ್ಲಿ ಭಗವಂತ ನೀಡಲಿ ಎಂದರು. 

 ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೃಷ್ಣಮೂರ್ತಿ, ಜಗದೀಶ್, ಜಿಲ್ಲೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ, ಪೊಲೀಸ್ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಿ ಮೌನಾಚರಣೆ ಸಲ್ಲಿಸಲಾಯಿತು.