ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹಿಸಿ ಆ.31ರಂದು ಬೃಹತ್ ಪ್ರತಿಭಟನೆ

ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹಿಸಿ ಆ.31ರಂದು ಬೃಹತ್ ಪ್ರತಿಭಟನೆ Massive protest on August 31 demanding declaration of drought-hit taluks


ಗದಗ 30: ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ನರಗುಂದ, ನರೇಗಲ್ಲ ಹಾಗೂ ರೋಣ ತಾಲೂಕುಗಳ ರೈತರನ್ನು ಬರ ಪರಿಹಾರದಿಂದ ವಂಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ವತಿಯಿಂದ ಆ.31ರಂದು ಗದಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30ಕ್ಕೆ ಗದಗ ದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಲಿದ್ದು, ಜಿಲ್ಲೆಯ ವಾಸ್ತವಿಕ ಬರ ಪರಿಸ್ಥಿತಿಯನ್ನು ಮರುಪರೀಶೀಲಿಸಿ, ಬರದಿಂದ ಬಾಧಿತವಾಗಿರುವ ಎಲ್ಲ ಅರ್ಹ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು. ಅರ್ಹ ರೈತರಿಗೆ ಬೆಳೆಹಾನಿ ಹಾಗೂ ಬರ ಪರಿಹಾರ ನೀಡಬೇಕು. ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬಗರ್ಹುಕುಂ ಮತ್ತು ಅರಣ್ಯ ಸಾಗುವಳಿ ರೈತರಿಗೂ ನಿಯಮಾನುಸಾರ ಬರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗುವುದು.