ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ Massive protest demanding compensation for crop damage

                 ವಿಜಯಪುರ 17: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಶೇಂಗಾ, ಮೆಕ್ಕೆ ಜೋಳ, ಸಜ್ಜಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಿರಂತರ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು ಈರುಳ್ಳಿ ಪರಿಸ್ಥಿತಿಯಂತೂ ಕಣ್ಣಾರೆ ನೋಡದಂತಾಗಿದೆ. ಈರುಳ್ಳಿ ಹತ್ತಿರ ಹೋದರೆ, ಕೊಳೆತ ಈರುಳ್ಳಿ ಕೊಳೆತ ಹೆಣಕ್ಕಿಂತಲೂ ಕನಿಷ್ಠ ನಾರುತ್ತವೆ.  ಇಂತಹ ಸಂದರ್ಭದಲ್ಲಿ ಸರ್ಕಾರ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡದೇ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸಿರುತ್ತಿದ್ದು, ಇದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಸಲ್ಲಿಸಲಾಯಿತು. 

                ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತೊಗರಿ ಬೆಳೆ ಹಾನಿಯಾದ ರೈತರಿಗೆ ಗುಲ್ಬರ್ಗಾ ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಕಂತುವಾಗಿ 263 ಕೋಟಿ ಹಣ ಬಿಡುಗಡೆಯಾಗಿ ರೈತರ ಖಾತೆಗೂ ಜಮಾ ಮಾಡಲಾಗಿದೆ. ಆದರೆ ನಮ್ಮ ವಿಜಯಪುರ ಜಿಲ್ಲೆಯ ರೈತರಿಗೆ ಇನ್ನು ಬಿಡಿಗಾಸು ಹಣ ಬಂದಿಲ್ಲ. ಮುಖ್ಯಮಂತ್ರಿಗಳು ಏಕ ಕಾಲಕ್ಕೆ ವೈಮಾನಿಕ ಸಮೀಕ್ಷೆ ನಡೆಸಿ ಗುಲ್ಬರ್ಗಾ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ಹಾನಿಗೊಳಗಾದ ತೊಗರಿ ಬೆಳೆ ಸೇರಿದಂತೆ ಎಲ್ಲ ಬೆಳೆಗಳ ಸ್ಥಿತಿಗತಿ ಕುರಿತು ಸಂಪೂರ್ಣ ಮನವರಿಕೆಮಾಡಿಕೊಂಡಿದ್ದಾರೆ. ಎಲ್ಲ ಬೆಳೆ ಹಾಳಾಗಿದ್ದು ಗಮನಕ್ಕೆ ಬಂದಿದ್ದರೂ ಕೂಡ ನಮ್ಮ ಜಿಲ್ಲೆ ರೈತರಿಗೆ ಪರಿಹಾರ ನೀಡದೆ ಮೊದಲ ಆದ್ಯತೆ ಗುಲ್ಬರ್ಗಾ ಜಿಲ್ಲೆಯ ರೈತರಿಗೆ ನೀಡಿದ್ದಾರೆ.

                ಮೊದಲಿನಿಂದಲೂ ಎಲ್ಲ ವಿಷಯದಲ್ಲಿಯೂ ಕೂಡ ನಮ್ಮ ಜಿಲ್ಲೆಯ ರೈತರಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ. ರೈತರ ಬಳಿ ಬಿಡಿಗಾಸು ಇಲ್ಲದ ಕಾರಣ ಹಿಂಗಾರಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮುಂಗಾರು ಬೆಳೆಯಂತೂ ಹಾಳಾಗಿ ಹೋಯ್ತು. ಹಿಂಗಾರು ಬೆಳೆಗಳಾದ ಜೋಳ, ಕಡಲೆ ಇವುಗಳನ್ನಾದರೂ ಬಿತ್ತನೆ ಮಾಡಿ ಬದುಕಲಿಕ್ಕಾದರೂ ಅನುಕೂಲವಾಗಲಿ ಎಂದು ಆಲೋಚನೆಯಲ್ಲಿದ್ದ ರೈತರಿಗೆ ಸರ್ಕಾರ ಪರಿಹಾರ ಕೊಡದೆ ಇರುವುದಕ್ಕೆ ರೈತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಎಲ್ಲ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ ವಿಳಂಬ ನೀತಿ ಅನುಸರಿಸಿದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

                ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಹಾಯ್ದು ಹೋಗಿರುವ ಡೋಣಿ ನದಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಮಾಡಿ ಅಲ್ಲಿ ವಾಸಿಸಲು ಜನರಿಗೆ ಮನೆ ಕಟ್ಟುವ ತಜಿವಿಜಿಯಲ್ಲಿ ಜಿಲ್ಲಾಡಳಿತವಿದ್ದು ಇದನ್ನು ನಾವು ಸಂಪೂರ್ಣ ವಿರೋಧಿಸುತ್ತೇವೆ. ಒಂದು ವೇಳೆ ಅಲ್ಲಿಯೇ ಮನೆ ನಿರ್ಮಾಣ ಮಾಡಿದರೆ ಮೇಲ್ಭಾಗದಲ್ಲಿ ಮಳೆಯಾದರೆ ಪ್ರವಾಹ ಬಂದು ಮನೆಗಳಲ್ಲಿ ನೀರು ನುಗ್ಗಿ ಕುಟುಂಬಗಳಿಗೆ ತೀವ್ರ ತೊಂದರೆಯಾಗುತ್ತದೆ. ಭೂ ಪರಿವರ್ತನೆ ಮಾಡಿದ್ದೇ ಕಾನೂನು ಬಾಹೀರವಾಗಿದೆ. ಆದ್ದರಿಂದ ಕೂಡಲೇ ಭೂ ಪರಿವರ್ತನೆ ಮಾಡಿದ್ದನ್ನು ರದ್ದುಮಾಡಬೇಕೆಂದು ಆಗ್ರಹಿಸಿದರು.

            ಪ್ರತಿಭಟನೆಯಲ್ಲಿ ಹುಣಶ್ಯಾಳ ಪಿ.ಬಿ. ಗ್ರಾಮದ ಸಂಗನಬಸವ ಶ್ರೀಗಳು, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಕರ್ನಾಟಕ ರಾಜ್ಯ ಹಸಿರು ಸೇನೆ ಮಹಾದೇವಪ್ಪ ತೇಲಿ, ಸಿದ್ದನಗೌಡ ಪಾಟೀಲ, ಹೊನಕೇರೆಪ್ಪ ತೆಲಗಿ, ಗುರಲಿಂಗಪ್ಪ ಪಡಸಲಗಿ, ಈರಣ್ಣ ದೇವರಗುಡಿ, ಮೌಲಾಸಾಬ ಸಾತಲಗಾವಿ, ರಾಮನಗೌಡ ಹಾದಿಮನಿ, ಎಚ್‌. ನಂದುಣಗಿ, ಅಶೋಕ ಉಪ್ಪಲದಿನ್ನಿ, ಗುರುರಾಜ ಪಡಶೆಟ್ಟಿ, ಲಕ್ಷ್ಮಣ ಕಂಬಾಗಿ, ಗೀರೀಶ ಕಲಘಟಗಿ, ಜುಲಾಶ ಮುಲ್ಲಾ, ಬಸವರಾಜ ಜಂಗಮಶೆಟ್ಟಿ, ಶಿವಪ್ಪ ಮಳಗೊಂಡ, ರಾಮನಗೌಡ ಸೋರೆಗಾವಿ, ಶಿವಪ್ಪ ಮಳಕೋಟಗಿ, ಹೊನ್ನಪ್ಪ ಗೋಟ್ಯಾಳ, ನೀಲಾಂಬಿಕಾ ಪಾಟೀಲ, ಜಗದೇವ ಸೂರ್ಯವಂತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.