ಮರೇವಾಡ ಬಸವಣ್ಣ(ನಂದೀಶ್ವರ)ನ ಜಾತ್ರಾ ಮಹೋತ್ಸವ
Marewada Basavanna (Nandishwara) Fair Festival
ಲೋಕದರ್ಶನ ವರದಿ
ಧಾರವಾಡ 28: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ತಾಲೂಕಿನ ಮರೇವಾಡ ಗ್ರಾಮದ ಬಸವಣ್ಣ(ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ(ಮೇ-1 ರಂದು) ಆಗಿ ಹುಣ್ಣಿವೆಯ ದಿನ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯ ಅಂಗವಾಗಿ ಏ.30 ರಂದು (ಗುರುವಾರ) ಸಂಜೆ 4.30 ಗಂಟೆಗೆ ಬಂಡಿ ಉತ್ಸವ ನಡೆಯುವುದು. ಇದೇ ದಿನ ಮರೇವಾಡ ಗ್ರಾಮದ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಸಾಮೂಹಿಕ ಶಿವನಾಮಸ್ಮರಣೆಯ ಭಜನಾ ಕಾರ್ಯಕ್ರಮ ದೇವಾಲಯದ ಅಂಗಳದಲ್ಲಿ ಜರುಗುವುದು.
ವಿಶೇಷ ಪೂಜೆ : ಮೇ-1 ರಂದು ಪ್ರಾತ:ಕಾಲ ಬಸವಣ್ಣ(ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಮತ್ತು ಪುಷ್ಪಾಲಂಕಾರದ ವಿಶೇಷ ಪೂಜೆ ಶೇಖರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಅವರ ವೈದಿಕತ್ವದಲ್ಲಿ ನಡೆಯಲಿದೆ. ನಂತರ ದೇವಾಲಯದ ಭಕ್ತ ಮಂಡಳಿ ಹಮ್ಮಿಕೊಳ್ಳುವ ದಾಸೋಹ ಸೇವೆಯ ಅನ್ನಸಂತರೆ್ಣಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಶಾಸಕರುಗಳಾದ ಅಮೃತ ದೇಸಾಯಿ ಮತ್ತು ಸೀಮಾ ಮಸೂತಿ, ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಗಣ್ಯರುಗಳಾದ ಮಂಜುನಾಥ ಮಕ್ಕಳಗೇರಿ, ತವನಪ್ಪ ಅಷ್ಟಗಿ, ಈಶ್ವರ ಶಿವಳ್ಳಿ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹು.ಧಾ.ಮ. ಪಾಲಿಕೆ ಸದಸ್ಯ ನಿತಿನ್ ಇಂಡಿ, ಬಸವಂತಪ್ಪ ಗಾಯಕವಾಡ, ಶಿವಾನಂದ ಕಮತಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಥೋತ್ಸವ : ಶುಕ್ರವಾರ(ಮೇ-1) ಸಂಜೆ 4.30 ಗಂಟೆಗೆ ಅಲಂಕೃತ ರಥೋತ್ಸವ ವೈಭವದಿಂದ ನಡೆಯುವುದು. ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿ ಬಸವಣ್ಣ(ನಂದೀಶ್ವರ) ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು-ಹೋಗುಗಳ ಕುರಿತು ಕಾರ್ಣಿಕ(ಹೇಳಿಕೆ) ಹೇಳುವರು. ಜಾತ್ರೆಯ ದಿನ ರಾತ್ರಿ 10 ಗಂಟೆಗೆ ಮರೇವಾಡ ಗ್ರಾಮದ ಶ್ರೀಸಾಯಿ ಸ್ವರಸಂಗಮ ಮೆಲೋಡೀಸ್ ಆ್ಯಂಡ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮಗಳು ಜರುಗುವವು.
ಅಮ್ಮಿನಬಾವಿ ಮತ್ತು ಮರೇವಾಡ ಗ್ರಾಮದ ಬಸವಣ್ಣ(ನಂದೀಶ್ವರ) ದೇವರು ಪರಸ್ಪರ ಸಹೋದರರು ಎಂಬ ಪ್ರತೀತಿ ಇದೆ. ದವನದ ಹುಣ್ಣಿವೆಗೆ ಅಮ್ಮಿನಬಾವಿ ಜಾತ್ರೆಯಾದರೆ, ಮುಂದಿನ ಆಗಿ ಹುಣ್ಣಿವೆಗೆ ಮರೇವಾಡದ ಜಾತ್ರೆ ನಡೆಯುತ್ತ ಬಂದಿದೆ. ಈ ಉಭಯ ಜಾತ್ರೆಗಳಲ್ಲಿ ಪರಸ್ಪರರ ಪಾಲ್ಕಿ-ನಂದಿಕೋಲುಗಳು ಆಯಾ ದೇವಾಲಯಗಳಿಂದ ಬಂದಾಗಲೇ ರಥೋತ್ಸವ ಸಾಂಗವಾಗುತ್ತಿರುವುದು ಪರಂಪರೆಯಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ಮರೇವಾಡ ಹಾಗೂ ಸುತ್ತಲಿನ ಎಲ್ಲ ಗ್ರಾಮಗಳ ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಬಸವಣ್ಣ (ನಂದೀಶ್ವರ) ದೇವರ ಕೃಪೆಗೆ ಪಾತ್ರರಾಗಬೇಕೆಂದು ಬಸವಣ್ಣ(ನಂದೀಶ್ವರ) ದೇವರ ದೇವಾಲಯದ ಪ್ರಸಾದ ಮಂಡಳಿ ಮತ್ತು ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 