ದೇವದಾಸಿ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಹಲವು ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Many programs to eradicate the evil practice of Devadasi: Minister Lakshmi Hebbalkar

ಮಾಜಿ ದೇವದಾಸಿಯರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ 

ದೇವದಾಸಿಯರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಾಲತಾ ನಾಯಕ್ ಪ್ರಶ್ನೆಗೆ ಸಚಿವರ ಉತ್ತರ 

ಬೆಳಗಾವಿ 13: ದೇವದಾಸಿಯರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ದೇವದಾಸಿ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸರಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ವಿಧಾನ ಪರಿಷತ್ ಕಲಾಪದಲ್ಲಿ  ಹೇಮಲತಾ ನಾಯಕ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವದಾಸಿ ಮಹಿಳೆಯರು ಗೌರವಯುತ ಜೀವನ ನಡೆಸುವ ವಾತಾವರಣ ಸೃಷ್ಟಿ ಮಾಡಲಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲೆಂದೇ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯನ್ನು ಅವರಿಗೂ ತಲುಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಎಲ್ಲಾ ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡಲಾಗುತ್ತಿದ್ದು, ಮಾಜಿ ದೇವದಾಸಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶನ  ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಪ್ರಸ್ತುತ 2,653 ದೇವದಾಸಿಯರಲ್ಲಿ 2550  ಮಹಿಳೆಯರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ ಎಂದರು. 45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ ತಲಾ 30 ಸಾವಿರದಂತೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು. ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ, ಈ ಯೋಜನೆಯಡಿ ನಿವೇಶನ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಗ್ರಾಮೀಣ ಪ್ರದೇಶದಲ್ಲಿ 1.75 ಲಕ್ಷ ರೂಪಾಯಿ ಮತ್ತು ನಗರ ಪ್ರದೇಶದಲ್ಲಿ 2 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.  

ಸಾಮಾನ್ಯ ಮಹಿಳೆಯರಂತೆಯೇ ಮಾಜಿ ದೇವದಾಸಿ ಮಹಿಳೆಯರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಮಾಜಿ ದೇವದಾಸಿ ವಸತಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಕಳೆದ 10 ವರ್ಷಗಳಲ್ಲಿ 823 ಮನೆಗಳು ಮಂಜೂರಾಗಿದೆ ಎಂದರು.