ಮಂಗಳೂರು, ಜ.1, ವಿಳಂಬ ಕಾಮಗಾರಿಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿರುವ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ತಲಪಾಡಿ ಟೋಲ್ ಗೇಟ್ ಬಳಿ ಶುಲ್ಕ ಸಂಗ್ರಹವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆಯಿತು.ಟೋಲ್ ಸಂಗ್ರಹಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಸಂಜೆ ಆರು ಗಂಟೆಯವರೆಗೆ ಈ ಕೇಂದ್ರದಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಲಾಗಿದೆ. ನಿಗದಿತ ಸಮಯದೊಳಗೆ ಮೇಲ್ಸೇತುವೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ಬಳಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಇಂದು ಬೆಳಗ್ಗೆ ಆಗಮಿಸಿ, ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ನಿನ್ನೆ ಟೋಲ್ ಸಂಗ್ರಹಿಸದಂತೆ ಸೂಚನೆ ನೀಡಿದ್ದರು. ಆದರೆ ಇಂದು ಬೆಳಗ್ಗೆ ಟೋಲ್‌ನಲ್ಲಿ ಎಂದಿನಂತೆ ಟೋಲ್ ಸಂಗ್ರಹಿಸಲಾಗುತ್ತಿತ್ತು. ನವಯುಗ ಮತ್ತು ಟೋಲ್ ಗೇಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನೀವಾಗಿಯೇ ಟೋಲ್ ಸಂಗ್ರಹ ಬಂದ್ ಮಾಡಿದರೆ ಉತ್ತಮ, ಇಲ್ಲವಾದರೆ ನಾವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾತಕತೆ ನಡೆಸಿದರು. ಅಂತಿಮವಾಗಿ ಇಂದು ಒಂದು ದಿನ ಟೋಲ್ ಸಂಗ್ರಹಿಸದಿರುವ ತೀರ್ಮಾನಕ್ಕೆ ಬಂದರು ಎಂದು ತಿಳಿದುಬಂದಿದೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್, ಟೋಲ್ ಗೇಟ್ ಬಂದ್‌ಗೆ ಸೂಚನೆ ನೀಡಿದ್ದರು. 2010ರಿಂದ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಇನ್ನೂ ಪೂರ್ಣವಾಗದೆ ಸಂಸದ ನಳಿನ್ ಕುಮಾರ್ ಕಟೀಲ್ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಿನ್ನೆ ನವಯುಗ ಸಂಸ್ಥೆಗೆ ಎಚ್ಚರಿಕೆ ನೀಡಿ ಕ್ರಿಮಿನಲ್ ಕೇಸು ದಾಖಲಿಸಿ ಟೋಲ್ ಸ್ಥಗಿತಕ್ಕೆ ನಳಿನ್ ಸೂಚನೆ ನೀಡಿದ್ದರು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನವಯುಗ ಸಂಸ್ಥೆಗೆ ಹತ್ತು ಹಲವು ಅವಕಾಶಗಳನ್ನು ಮಾಡಿಕೊಡಲಾಯಿತು. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣದಿಂದ ಅದಕ್ಕೆ ಸುಮಾರು 62 ಕೋಟಿ ರೂಪಾಯಿ ಸಾಲ ಸೌಲಭ್ಯವನ್ನೂ ಸರ್ಕಾರ ಮಾಡಿಕೊಟ್ಟಿದೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಸಂಸ್ಥೆಯ ನಿರ್ಲಕ್ಷ್ಯದಿಂದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಿದೆ. ಜನರಿಗೆ ಅನ್ಯಾಯವಾದರೆ ಜನಪ್ರತಿನಿಧಿಗಳು ಸುಮ್ಮತೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇಂದು ಸಂಜೆ ಆರು ಗಂಟೆಯವರೆಗೆ ಟೋಲ್ ಸಂಗ್ರಹಿಸದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.