ರಾಕ್ ಗಾರ್ಡನ್ನಲ್ಲಿ ಮನಸೆಳದ ಮಕ್ಕಳ ವಾರದ ಸಂತೆ

ಲೋಕದರ್ಶನವರದಿ

ಶಿಗ್ಗಾವಿ : ಬರ್ರೀ..ಬರ್ರೀ. ಅಪ್ಪರ,ಅಕ್ಕರ,ಅಣ್ಣರ..ತೆಗೊಳ್ರೀ ಭಾರೀ ಸೋವಿದರಾಗ ತಾಜಾ ತರಕಾರಿ, ದವಸ, ಧಾನ್ಯ, ಹಣ್ಣು ಹಂಪಲು ಮಾರಾಖತ್ತೀವಿ.. ಈ ಏರು ಧ್ವನಿಯ ಕಿರುಚಾಟ ಕೇಳಿ ಬಂದ್ದದುಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಾರದ ಸಂತೆಯಲ್ಲಿ.

ಎಲ್ಕೆಜಿ ಯಿಂದ ಆರನೇ ತರಗತಿ ವರೆಗಿನ ಮಕ್ಕಳು ಗಾರ್ಡನ್ನ ರಾಜ್ ಹೊಟೀಲ್ ಆವರಣದಲ್ಲಿ ಪ್ಲಾಸ್ಟಿಕ್ ಚೀಲ ಹಾಸಿಕೊಂಡು ಗೋಣಿ ಚೀಲಗಳ ಮೇಲೆ ತಾವು ತಂದ ಸಾಮಗ್ರಿ ಇಟ್ಟುಕೊಂಡು ಗ್ರಾಹಕರಾಗಿ ಬಂದ ತಮ್ಮ ಪೋಷಕರನ್ನು ಏರು ಧ್ವನಿಯಲ್ಲಿ ಕರೆಯುತ್ತಿದ್ದರು. ಅಕ್ಕರ.. ಹತ್ತು ರೂ.ಗೆ ಎಷ್ಟ ಟೊಮೆಟೋ ಬರತೈತ್ರೀ. ಒಂದು ಕೆಜಿ ತಗೋಳ್ರಿ ಎಂದು ಕೇಳಿಕೊಳ್ಳುತ್ತಿದ್ದ ದೃಶ್ಯ ಪುಟಾಣಿಯೊಬ್ಬನಿಂದ ಕೇಳಿ ಬಂದರೆ, ಮತ್ತೊಬ್ಬ ಉಳ್ಳಾಗಡ್ಡಿ ಭಾರೀ ದುಬಾರಿ ಆಗೈತ್ರಿ..ನನ್ನ ಹತ್ತಿರ ಬರೀ 40 ರೂ.ಗೆ ಕೆಜಿ ನೋಡಿರ ಅಂತ ವಿವರಿಸುತ್ತಿದ್ದುದು ಕಂಡು ಬಂತು.

   ಪ್ರತಿವಾರ ಬುಧವಾರ ಶಿಗ್ಗಾವಿನಲ್ಲಿ ನಡೆಯುವ ವಾರದ ಸಂತೆಯಲ್ಲಿ ಲಭ್ಯವಿರುವ ಚೂಡಾ ವಠಾಣಿ, ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ತೆೆಂಗಿನಕಾಯಿ,ನಿಂಬೆ ಹಣ್ಣು,ಮೆಣಸಿನಕಾಯಿ, ಕುರ್ ಕುರ್ ತಿಂಡಿಗಳು,ಖಾರದ ಪುಡಿ, ಬೆಳೆ,ಕಾಳುಗಳು ದೇವರ ಪೂಜಾ ಸಾಮಗ್ರಿ ಅಂಗಡಿಗಳು, ಬಾಳೆಹಣ್ಣು ಅಂಗಡಿಗಳು, ತಂಪು ಪಾನೀಯ ಅಂಗಡಿಗಳು, ಹೊಟೇಲ್ (ಗಿರ್ಮಿಟ್,ಮಿಚರ್ಿ,ಖಾರ ಮಂಡಕ್ಕಿ) ಅಂಗಡಿಗಳು ಮಕ್ಕಳ ಸಂತೆಯಲ್ಲಿದ್ದವು. ಶಾಲೆ ಮಕ್ಕಳು ಹಾಕಿದ 200 ಅಂಗಡಿಗಳಲ್ಲಿ ಪೋಷಕರು, ಪ್ರವಾಸಿಗರು ವ್ಯಾಪಾರ ಮಾಡುತ್ತಿದ್ದುದು ಕಂಡು ಬಂತು.

     ತಮ್ಮ ಮಕ್ಕಳನ್ನು ಬಿಟ್ಟು ಆತನ ಸಹಪಾಠಿಗಳ ಅಂಗಡಿಗಳಿಂದ ಪೋಷಕರು ತಮಗೆ ಬೇಕಾದ ಸಾಮಗ್ರಿ ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದುದು ಕಂಡು ಬಂತು. ತಮ್ಮ ಶಿಕ್ಷಕರ ಅಣತಿಯಂತೆ ಹೆಚ್ಚಿನ ವ್ಯಾಪಾರ ಮಾಡುವ ಹುಮ್ಮಸ್ಸಿನಲ್ಲಿದ್ದ ಮಕ್ಕಳು ಸಂತೆಗಳಲ್ಲಿ ಅಂಗಡಿಯವರು ತೊಡುವ ಪೋಷಾಕುಗಳನ್ನು ಧರಿಸಿದ್ದು ಪೋಷಕರ ಮೊಗದಲ್ಲಿ ನಗು ಚಿಮ್ಮಿಸಿತ್ತು.

     ಒಬ್ಬ ತಲೆಗೆ ಟಾವೆಲ್ ಸುತ್ತಿಕೊಂಡು ಒಳವಸ್ತ್ರ ಕಾಣುವಂತೆ ಲುಂಗಿ ಮೇಲೆತ್ತಿದ್ದರೆ, ಮತ್ತೊಬ್ಬ ಹೆಗಲ ಮೇಲೆ ಹಾಕಿಕೊಂಡ ಟಾವಲ್ನಿಂದ ಬೆವರು ಒರೆಸುತ್ತ ಗ್ರಾಹಕರನ್ನು ಏರು ಧ್ವನಿಯಲ್ಲಿ ಕರೆಯುತ್ತಿದ್ದರೆ ಉಳಿದವರು ತಲೆ ತೆಗ್ಗಿಸಿಕೊಂಡು ತಾವು ಮಾಡಿದ ವ್ಯಾಪಾರದ ಹಣವನ್ನು ಲೆಕ್ಕ ಮಾಡುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಸಂತೆ ಮಧ್ಯಾಹ್ನದ ವೇಳೆಗೆ ಜನಸಂದಣಿಯಿಂದ ಕೂಡಿತ್ತು. ಸಂಜೆ 5 ರ ಹೊತ್ತಿಗೆ ಮಕ್ಕಳು ಒಬ್ಬೊಬ್ಬರೇ ತಮ್ಮ ಅಂಗಡಿ ತೆರವುಗೊಳಿಸಿ ಮನೆಯ ಕಡೆ ಹೆಜ್ಜೆ ಹಾಕಿದರು.

ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ವ್ಯಾಪಾರ,ವ್ಯವಹಾರದ ಬಗ್ಗೆ ಅರಿವು ಮೂಡಿಸುತ್ತಿರುವ ಉತ್ಸವ ಶಾಲೆಯ 'ಮಕ್ಕಳ ವಾರದ ಸಂತೆ'ಯು ಉಪಯುಕ್ತಕಾರಿ ಆಗಿದ್ದು ಉಳಿದ ಶಾಲೆಗಳಿಗೆ ಮಾದರಿ ಆಗಿದೆ. ಈ ಸಂತೆಯಲ್ಲಿ ತಾನು ಗ್ರಾಹಕನಾಗಿ ಭಾಗವಹಿಸಿದ್ದರಿಂದ ಬಹಳ ಸಂತೋಷವಾಯಿತು.

-ಐ.ಬಿ.ಬೆನಕೊಪ್ಪ

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಗ್ಗಾಂವ-ಸವಣೂರು