ವಿಜಯಪುರ 11: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಮುರಾರ್ಜಿ ವಸತಿ ಶಾಲೆ ಘಾಳಪೂಜೆಗೆ ನುಗ್ಗಿ 10ನೇ ತರಗತಿಯಲ್ಲಿ ಓದುತ್ತಿರುವ ವಾಲ್ಮೀಕಿ ಸಮಾಜದ ವಿದ್ಯಾರ್ಥಿನಿಯನ್ನು ಬಲವಂತವಾಗಿ ತಾಳಿಕಟ್ಟಿ ಚಿತ್ರಹಿಂಸೆ ನೀಡಿ ಆಕೆಯ ಸಾವಿಗೆ ಕಾರಣವಾದ ಸಂಗಮೇಶ ತಂದೆ ಬಡೆಪ್ಪ ಜುಂಜಾವರ ಅವನನ್ನು ಹಾಗೂ ಇನ್ನುಳಿದ ಆರೋಪಿತರನ್ನು ಮತ್ತು ಈ ಘಟನೆಗೆ ಪ್ರಚೋದನೆ, ಕುಮ್ಮಕ್ಕೂ ನೀಡದವರನ್ನು ಗಲ್ಲಿಗೇರಿಸಬೇಕು. ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತೀಯ ವಾಲ್ಮಿಕಿ ಸಮಾಜ ಸೇವಾ ಸಂಘದ ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ ಬಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ವಿದ್ಯಾರ್ಥಿನಿಯು ಆರೋಪಿತ ವ್ಯಕ್ತಿಯ ಬಗ್ಗೆ ಈ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕೂಡ, ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಘಟನೆಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ಪೊಲೀಸ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿರುವುದರಿಂದ ಕೂಡಲೇ ಸರ್ಕಾರ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಗಳನ್ನು ಸೇರಿದಂತೆ ಎಲ್ಲ ಆರೋಪಿತರನ್ನು ಸಿಬಿಐ ತನಿಖೆಗೆ ಒಳಪಡಿಸಿ ರಾಜ್ಯದ ಯಾವುದೇ ಶಾಲೆ, ಕಾಲೇಜು, ವಸತಿ ನೀಲಯ, ವಿಶ್ವವಿದ್ಯಾಲಯದ ಆವರಣದಲ್ಲಿ ಮುಂದೆ ಇಂತಹ ಅಮಾನವೀಯ ಕೃತ್ಯ ನಡೆಯದಂತೆ ಕಠಿಣ ಶಿಕ್ಷೆಯನ್ನು ಈ ಆರೋಪಿತರಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ನಡೆದು ವಾರಗಳು ಗತಿಸಿದರು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತ್ರಸ್ತ ದಲಿತ ಕುಟುಂಬಕ್ಕೆ ಭೇಟಿಯಾಗಿ ಸಾಂತ್ವನ ಹೇಳದೆ ಇರುವುದು ಖಂಡನೀಯವಾಗಿದೆ. ಕೂಡಲೇ ಸಂಬಂಧಿಸಿದ ಶಾಸಕರು, ಸಚಿವರು ಸೇರಿದಂತೆ ಅಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು. ಜೊತೆಗೆ ಕಡುಬಡವರಾಗಿರುವ ನೊಂದ ಕುಟುಂಬಕ್ಕೆ ಸರ್ಕಾರದಿಂದ ಕುಟುಂಬದ ಓರ್ವರಿಗೆ ಸರ್ಕಾರಿ ನೌಕರಿ ಸೇರಿದಂತೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಸಂತ್ರಸ್ತ ಕುಟುಂಬಕ್ಕೆ ನಮ್ಮ ಅಖಿಲ ಭಾರತೀಯ ಸಮಾಜ ಸೇವಾ ಸಂಘ ಹಾಗೂ ವಾಲ್ಮೀಕಿ ಸಮಾಜ ಬೆಂಬಲವಾಗಿ ನಿಲ್ಲಲಿದೆ ಎಂದರು.
ಜೊತೆಗೆ ರಾಜ್ಯದಲ್ಲಿ ಪದೇ ಪದೇ ದಲಿತ ವರ್ಗದ ಜನಾಂಗದ ಮೇಲೆ ಅನ್ಯಾಯ ಅತ್ಯಾಚಾರಗಳಂತಹ ಘಟನೆಗಳು ಜರುಗುತ್ತಿದ್ದರು ಕೂಡಾ ಸರ್ಕಾರ ತನಗೇನು ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ನಾಚಿಗೇಡಿನ ಸಂಗತಿಯಾಗಿದೆ. ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಿ ದಲಿತ ಜನಾಂಗದ ಮೇಲೆ ಜರುಗುತ್ತಿರುವ ಅನ್ಯಾಯ ಅತ್ಯಾಚಾರಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಮುಂದಾಗಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಮೀಸಲಾತಿ ಮೇಲೆ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಲ್ಲಿಕಾರ್ಜುನ ಬಟಗಿ ಎಚ್ಚರಿಕೆ ನೀಡಿದ್ದಾರೆ.