ಬೆಳಗಾವಿ ಡಿ.13: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ವತಿಯಿಂದ ರೂ.50 ಕೋಟಿ ಷೇರು ಬಂಡವಾಳ ಒದಗಿಸುವ ಯಾವುದೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಸ್ಪಷ್ಟ ಪಡಿಸಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮೇಲಿಂತೆ ಸಚಿವರು ಉತ್ತರಿಸಿದರು.
ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ದಿ ಮೈಸೂರು ಷುಗರ್ ಕಂಪನಿ ಹೊರತು ಪಡಿಸಿ ಯಾವುದೇ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರದಿಂದ ಷೇರು ಬಂಡವಾಳ ಅಥವಾ ಅನುದಾನ ನೀಡುವ ನೀತಿ ಸರ್ಕಾರದ ಮುಂದೆ ಇರುವುದಿಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆಯು ಚುನಾಯಿತ ಆಡಳಿತ ಮಂಡಳಿಯನ್ನು ಹೊಂದಿದೆ. ಕಾರ್ಖಾನೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಪನ್ಮೂಲ ಕ್ರೋಢಿಕರಿಸುವುದು ಆಡಳಿತ ಮಂಡಳಿ ಜವಬ್ದಾರಿಯಾಗಿದೆ. ಆರ್ಥಿಕ ಸಂಕಷ್ಟದಿಂದ ಹಾಗೂ ಇತರೆ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ದೀರ್ಘಾವಧಿಯ ಮೆಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಬಹುದು. ಈ ಬಗ್ಗೆ ಕಾರ್ಖಾನೆ ಸಾಮಾನ್ಯ ಸಭೆ ಮತ್ತು ಆಡಳಿತ ಮಂಡಳಿ ಸಭೆ ಸೂಕ್ತ ತೀರ್ಮಾನ ಕೈಗೊಂಡು ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಪರೀಶೀಲನೆ ನಡೆಸುವುದು ಎಂದು ಸಚಿವ ಶಿವಾನಂದ ಎಸ್ ಪಾಟೀಲ್ ಹೇಳಿದರು.