ಶಿಕ್ಷಣದೊಂದಿಗೆ ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಸಹಕಾರಿ: ಪಾಟೀಲ್

Makkala Santhe helps to develop business knowledge along with education: Patil

ಗುರ್ಲಾಪೂರ 18:  ಶಿಕ್ಷಣದೊಂದಿಗೆ ನೈಜ ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಿದೆ ಮತ್ತು ಇದು ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾದ ಕಾರ್ಯಕ್ರಮವಾಗಿದೆ ಎಂದು ಪ್ರಧಾನ ಗುರುಗಳಾದ ಬಿ ಪಿ ಪಾಟೀಲ್ ಹೇಳಿದರು.  

ಅವರು ಸಮೀಪದ ಹಳ್ಳೂರ್ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರ್ ಕ್ರಾಸ್, ತೋಟದ ಶಾಲೆಯಲ್ಲಿ ಮಕ್ಕಳಲ್ಲಿನ ವ್ಯವಹಾರಿಕಾ ಜ್ಞಾನದ ವೃದ್ಧಿಗಾಗಿ ಏರಿ​‍್ಡಸಿದ ಮಕ್ಕಳ ಹಳ್ಳಿ ಸಂತೆಯನ್ನು ಉದ್ದೇಶಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಎಲ್ಲ ಕ್ಷೇತ್ರದಲ್ಲಿ ಸಜ್ಜುಗೊಳಿಸುವ ಅಗತ್ಯವಿದೆ ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ತೊಡಗಿಕೊಂಡಿದ್ದು ತುಂಬಾ ಸಂತಸ ತಂದಿದೆ ಎಂದರು.  

ಹಿರಿಯರಾದ ಬಾಬು ಪಾ ಸಪ್ತಸಾಗರ ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಎಸ್ ಬಿ ಗೊರಗುದ್ದಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಪಾಠದ ಜೊತೆಗೆ ಪಠ್ಯೇತರ ಹಾಗೂ ವ್ಯವಹಾರಿಕ ಜ್ಞಾನಕ್ಕೆ ಒತ್ತು ಕೊಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಧ್ಯ ಎಂದು ಹೇಳಿದರು. ಶಿಕ್ಷಕರು ನಮ್ಮ ಶಾಲೆಯಲ್ಲಿ ಈ ರೀತಿ ವಿಭಿನ್ನ ಕಾರ್ಯಕ್ರಮಗಳನ್ನ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.  

ಎಲ್ಲರ ಮನಸೊರೆಗೊಂಡ ಮಕ್ಕಳ ಸಂತೆ ಮಕ್ಕಳಲ್ಲಿನ ಸಂವಹನ ಮತ್ತು ವ್ಯವಹಾರಿಕ  ಕೌಶಲ್ಯ  ಹೆಚ್ಚಿಸುವ ಉದ್ದೇಶದಿಂದ ಸ್ವ ಅನುಭವ ನೀಡುವ ಈ ಸಂತೆಯು ನೋಡುಗರ  ಮನಸ್ಸನ್ನು ಸೆಳೆಯಿತು. ಮಕ್ಕಳು ವಿಶೇಷ ಉಡಿಗೆಗಳೊಂದಿಗೆ ಹೊಲದಲ್ಲಿ ಬೆಳೆದ ವಿವಿಧ ತರಕಾರಿ, ಹಣ್ಣು ಹಂಪಲ, ದಿನಸಿ ಕಾಳುಗಳು, ವಿಶೇಷವಾದ ತಿಂಡಿ ತಿನಿಸುಗಳಾದ ,ಬೇಲ್ಪುರಿ, ಬೋಂಡಾ ಬಜ್ಜಿ, ಕಾಫಿ, ಟೀ ಸೇರಿದಂತೆ ಹಲವು ಅಗತ್ಯ  ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರ ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು. ಪರಸ್ಪರ ಸ್ವರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು ಎಂಬ ಛಲದಿಂದ ಪೋಷಕರನ್ನು ಕರೆದು ತಮ್ಮ  ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು.  

ಪಾಲಕರು ಶಿಕ್ಷಕರು ಅತಿ ಉತ್ಸಾಹದಿಂದ ಮಕ್ಕಳು ಸಂತೆಯಲ್ಲಿ ತಂದ ವಸ್ತುಗಳ  ಖರೀದಿಯಲ್ಲಿ  ಮುಗಿಬಿದ್ದರು. ಸಂತೆಯಲ್ಲಿ ಪಾಲ್ಗೊಂಡ ಪಾಲಕರು ಶಿಕ್ಷಕರು ಮಕ್ಕಳು ಇಡ್ಲಿ ಸಾಂಬಾರ್ ಭೋಜನ ಸವಿದು  ಸಂಭ್ರಮಿಸಿದರು. ಈ ವಿಶೇಷ ಹಳ್ಳಿ ಸಂತೆಯಲ್ಲಿ ಶಾಲೆಯ ಎಸ್‌ಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಪಾಲಕರು ಪ್ರಧಾನಗಳು ಸಹ ಶಿಕ್ಷಕರು ಮುದ್ದು ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಂಡು ಸಂತೆಯನ್ನು ಯಶಸ್ವಿಗೊಳಿಸಿದರು..