ಮ್ಯಾಗ್ನೆಟ್ ಶಾಲೆ ಸದುಪಯೋಗ ಮಾಡಿಕೊಳ್ಳಿ: ದಮ್ಮೂರಮಠ

ಮ್ಯಾಗ್ನೆಟ್ ಶಾಲೆ ಸದುಪಯೋಗ ಮಾಡಿಕೊಳ್ಳಿ: ದಮ್ಮೂರಮಠ  Make good use of magnet school: Dammoor Math

ತಾಳಿಕೋಟೆ 23 : ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು, ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕಾರಣದಿಂದ ಶಿಕ್ಷಣ ಇಲಾಖೆ ಅನೇಕ ನೂತನ ಯೋಜನೆಗಳನ್ನು ಪರಿಚಯಿಸುತ್ತಿದ್ದು ಮ್ಯಾಗ್ನೆಟ್ ಶಾಲೆ ಅವುಗಳಲ್ಲಿ ಒಂದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ.ದಮ್ಮೂರಮಠ ಹೇಳಿದರು. ಅವರು ಪಟ್ಟಣದ ಎಸ್‌.ಕೆ.ಕೋಚಿಂಗ್ ಶಾಲೆಯ ಆವರಣದಲ್ಲಿ ನಿವೃತ್ತ ಮುಖ್ಯಶಿಕ್ಷಕ ಎನ್‌.ಎಸ್‌.ಪೂಜಾರಿ ಪರಿವಾರದ ವತಿಯಿಂದ ಆಯೋಜಿಸಲಾಗಿದ್ದ ಸಹೃದಯಿ ಶಿಕ್ಷಕರ ಬಳಗದ 136ನೆಯ ಮಾಸಿಕ ಸಭೆಯಲ್ಲಿ ಶನಿವಾರ ಸಂಜೆ ಮಾತನಾಡಿದರು.  

ಮ್ಯಾಗ್ನೆಟ್ ಶಾಲೆಯು ಸಕಲರೀತಿಯಿಂದ ಸುಸಜ್ಜಿತವಾಗಿದ್ದು ನವೋದಯ ಮಾದರಿಯ ಶಿಕ್ಷಣವನ್ನು ನೀಡಲಾಗುತ್ತದೆ ಇದಕ್ಕಾಗಿ ಆರಂಭದಲ್ಲಿ ಒಂದೇ ಆವರಣದಲ್ಲಿನ ಶಾಲೆಗಳನ್ನು ಒಗ್ಗೂಡಿಸುವುದು, ನಂತರ ಒಂದು ಗ್ರಾಮದಲ್ಲಿನ ಶಾಲೆಗಳನ್ನು ಒಗ್ಗೂಡಿಸುವುದು ತದನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳನ್ನು ಒಗ್ಗೂಡಿಸಿ ಗ್ರಾಮಪಂಚಾಯತಿಗೊಂದು ಮ್ಯಾಗ್ನೆಟ್ ಶಾಲೆ ನಿರ್ಮಿಸಲಾಗುವುದು ಅಲ್ಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮದಿಂದ ಸರ್ಕಾರಿ ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಆಧುನೀಕರಣ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲಾಗುತ್ತದೆ.

ಇದರೊಂದಿಗೆ ‘ಕಾಮ್ಸ್‌’ ಆ್ಯಪ್ ಮೂಲಕ ಶಿಕ್ಷಕರ ಹಾಜರಾತಿ ಹಾಗೂ ‘ನಿರಂತರ’ ಆ್ಯಪ್ ಮೂಲಕ ಮಕ್ಕಳ ಹಾಜರಾತಿಯನ್ನು ಎಐ. ತಂತ್ರಜ್ಞಾನ ಬಳಸಿ ಹಾಕಲಾಗುವುದು ಇದರಿಂದ ಮಕ್ಕಳ ಹಾಜರಾತಿಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ನೆರವಾಗಲಿದೆ. ಇದೇ ಜುಲೈ ಒಂದರಿಂದ ಇವೆರಡು ಆ್ಯಪ್ ಗಳು ಎಚ್‌.ಆರ್‌.ಎಂ.ಎಸ್‌.ಗೆ ಲಿಂಕ್ ಆಗುತ್ತವೆ ಎಂದರು. ಸ್ಥಳೀಯ ಎಸ್‌.ಬಿ.ಐ.ನ ವ್ಯವಸ್ಥಾಪಕ ಮಂಜುನಾಥ ಕಟ್ಟಿಮನಿ ಅವರು ಮಾತನಾಡಿ , ಆರ್ಥಿಕ ಸುರಕ್ಷತೆ ಹಾಗೂ ಆರ್ಥಿಕ ಸಾಕ್ಷರತೆ ಇಂದಿನ ಅವಶ್ಯಕತೆಯಾಗಿದೆ ಮೊಬೈಲ್ ಗಳಲ್ಲಿ ಬರುವ ಯಾವುದೇ ಆಮಿಷಕ್ಕೆ ಒಳಗಾಗಬೇಡಿ, ಓಟಿಪಿ ಹೇಳಬೇಡಿ ಯಾವುದೇ ವ್ಯವಹಾರವಿದ್ದರೂ ನೇರವಾಗಿ ಬ್ಯಾಂಕಿಗೆ ಬಂದು ವ್ಯವಹರಿಸಿ.

ಫೋನ್ ನಲ್ಲಿ ನಿಮ್ಮ ಯಾವುದೇ ಮಾಹಿತಿಯನ್ನು ಹೇಳಬೇಡಿ, ಷೇರು ಮಾರುಕಟ್ಟೆಯಲ್ಲಿ ಸಂಪೂರ್ಣ ಮಾಹಿತಿಯಿಲ್ಲದೇ ಹಣ ಹೂಡಬೇಡಿ, ಸಾಲ ಪಡೆದವರು ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಸಾಹಿತಿ ಸಾಹೇಬಗೌಡ ಬಿರಾದಾರ ಮಾತನಾಡಿ, ಬದುಕಿನಲ್ಲಿ ಗಳಿಕೆಗೆ ಆದ್ಯತೆ ನೀಡದೇ ಸಂಬಂಧಗಳಿಗೆ ಆದ್ಯತೆ ನೀಡಬೇಕು ಎಂದರು. ಶಿಕ್ಷಕರುಗಳಾದ ಗುಂಡುರಾವ್ ಧನಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌.ಎಫ್ ಹಿರೇಮಠ ನಿರ್ವಹಿಸಿದರು. ಟಿ.ಸಿ.ಸಜ್ಜನ ಮಾತನಾಡಿದರು. ಅಶೋಕ ಪತ್ತಾರ ವಂದಿಸಿದರು. ವೇದಿಕೆಯಲ್ಲಿ ಪೂಜಾರ ಪರಿವಾರದವರಿದ್ದರು.