ಮಕ್ಕಳನ್ನೇ ಅಮೂಲ್ಯ ಆಸ್ತಿಯನ್ನಾಗಿ ಮಾಡಿ: ಶಿಕ್ಷಕ ಸಜ್ಜನ

ಮಕ್ಕಳನ್ನೇ ಅಮೂಲ್ಯ ಆಸ್ತಿಯನ್ನಾಗಿ ಮಾಡಿ: ಶಿಕ್ಷಕ ಸಜ್ಜನ  Make children your precious assets: Teacher Sajjana

ತಾಳಿಕೋಟಿ 18 :  ಪಾಲಕರು ತಮ್ಮ ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಸಾಲದು ಅವರಿಗೆ ಒಳ್ಳೆಯ ಸಂಸ್ಕಾರಗಳನ್ನೂ ಕಲಿಸಿಕೊಡಬೇಕು. ಭೌತಿಕ ಆಸ್ತಿಯನ್ನೇ ಸಂಪಾದಿಸುವುದಕಿಂತ ಹೆಚ್ಚಾಗಿ ಮಕ್ಕಳನ್ನೇ ಒಂದು ಅಮೂಲ್ಯ ಆಸ್ತಿಯನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಶಿಕ್ಷಕ ಎಸ್ ಬಿ ಸಜ್ಜನ ಹೇಳಿದರು. ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಸಂಜೆ ಸಜ್ಜನ ಗಾಣಿಗರ ಸೇವಾ ಸಂಘ(ರಿ) ವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.85 ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದ ಒಗ್ಗಟ್ಟಿನಿಂದ ಎಂಥಹ ದೊಡ್ಡ ಕಾರ್ಯವನ್ನಾದರೂ ಮಾಡಬಹುದು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ.  

ಸಂಘದಿಂದ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು. ಸಜ್ಜನ ಗಾಣಿಗರ ಸೇವಾ ಸಂಘದ ನಿರ್ದೇಶಕ ಕಾಶಿನಾಥ ಪ್ರಸ್ತಾವಿಕವಾಗಿ ಮಾತನಾಡಿ ಸಜ್ಜನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಂಘದ ವತಿಯಿಂದ ಮಾಡಲಾಗುತ್ತಿದೆ ಇದರಿಂದ ಅವರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂಬುದು ಇದರ ಉದ್ದೇಶವಾಗಿದೆ ಎಂದರು. ಸಜ್ಜನ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಗಣ್ಯರಾದ ಶರಣಪ್ಪ ಸಜ್ಜನ, ಬಸವರಾಜ ಜಾಲಿಬೆಂಚಿ, ಪ್ರಕಾಶ ಸಜ್ಜನ ಬಿಳವಾರ,ತಿಪ್ಪಣ್ಣ ಸಜ್ಜನ, ವಿದ್ಯಾರ್ಥಿಗಳ ಪೋಷಕರು ಹಾಗೂ ಸಜ್ಜನ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು. ಜಯಶ್ರೀ ಸಜ್ಜನ ಪ್ರಾರ್ಥಿಸಿದರು.ಎಸ್‌.ಬಿ.ಸಜ್ಜನ ಸ್ವಾಗತಿಸಿದರು. ಕಾಶಿನಾಥ ಸಜ್ಜನ ನಿರೂಪಿಸಿದರು. ಬಸವರಾಜ ಸಜ್ಜನ ವಂದಿಸಿದರು.