ನಿಗಮದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ

ಕೊಪ್ಪಳ 19: ಸರ್ಕಾರದ ಯೋಜನೆಗಳು ಮತ್ತು ನಿಗಮಗಳಿಂದ ನೀಡಲಾಗುವ ಕಿರು ಸಾಲ, ವಸತಿ ಮತ್ತು ಜಮೀನು ಸೌಲಭ್ಯ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಸಾಧಿಸಲು ಮಹಿಳೆಯರು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.

ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು (ಜ.19) ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹಿಳಾ ಅಭಿವೃದ್ಧಿಯೂ ಒಂದು ಮುಖ್ಯ ಘಟ್ಟವಾಗಿದ್ದು, ಮಹಿಳೆಯರ ಸಮಸ್ಯೆಗಳನ್ನು ಗುರುತಿಸಿ ಅಸಾಯಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಬೇಕು. ದೇಶದ ಪ್ರಗತಿಗೆ ಮಹಿಳೆಯ ಕೊಡುಗೆ ಅಪಾರವಾದದ್ದು, ಮಹಿಳೆ ಎಂದರೆ ಭೂಮಿ, ನದಿ, ಪರ್ವತ, ಪಾರ್ವತಿಯ ನವದುರ್ಗೆಯರ ಅವತಾರ ಹೀಗಿರುವಾಗ ಮಹಿಳೆಯರು ಸಾಧನೆಗೆ ಮುಂದಾಗಬೇಕು. ಇಲಾಖೆ ಮತ್ತು ನಿಗಮದಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬೇರೆ ಅಸಾಯಕ ಮಹಿಳೆಯರನ್ನು ಒಟ್ಟುಗೂಡಿಸಿ ಆರ್ಥಿಕವಾಗಿ ಪ್ರಗತಿ ಹೊಂದಲು ನಿಗಮಗಳನ್ನು ಉಪಯೋಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಗಳನ್ನು ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಸಹಾಯಕ ನಿರ್ದೇಶಕರಾದ ವಿರೇಂದ್ರ ಅವರು ಮಾತನಾಡಿ ಅಧ್ಯಕ್ಷರು ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದ್ದು, ಇಲಾಖೆಯ ಅಧಿಕಾರಿಗಳು, ಒಕ್ಕೂಟದವರು ಸೇರಿ ಕಲ್ಯಾಣ ಕನರ್ಾಟಕದಲ್ಲಿ ಮಹಿಳೆಯರ ಅಭಿವೃದ್ಧಿಗೆ ಭರವಸೆ ನೀಡುತ್ತೇವೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳೆ ಅವರು ಧನಶ್ರೀ ಯೋಜನೆ, ಚೇತನ ಸಂಸ್ಥೆ ಯೋಜನೆ, ದೇವದಾಸಿಯರ ವಿವಿಧ ಸಾಲಸೌಲಭ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ ಸೇರಿದಂತೆ ಇನ್ನಿತರ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ಪಡೆದ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. 

ದೇವದಾಸಿಯರಿಗೆ ವಸತಿ ಯೋಜನೆಯಡಿ ಫಲಾನುಭವಿಗಳು 50 ಸಾವಿರ ಸಾಲವನ್ನು ಸಬ್ಸಿಡಿ ರೂಪದಲ್ಲಿ ಪಡೆದು ತಮ್ಮ ಉಪ-ಜೀವನವನ್ನು ನಡೆಸುತ್ತಿದ್ದೇವೆ. ಧನಶ್ರೀ ಯೋಜನೆಯಡಿ ಸಾಲವನ್ನು ಪಡೆದು ಸಬ್ಸಿಡಿಯನ್ನು ತುಂಬುತ್ತಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಸಣ್ಣ ಪುಟ್ಟ ಅಂಗಡಿಗಳ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಚೇತನ ಸಂಸ್ಥೆ ಯೋಜನೆಯಡಿ 25 ಸಾವಿರ ರೂ. ಗಳ ಸಾಲ ಪಡೆದು ಒಂದು ಆಕಳನ್ನು ತೆಗೆದುಕೊಂಡಿದ್ದೆವು, ಈಗ ಇದರಿಂದ ನಾವು ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕು ಅಂದುಕೊಂಡಿದ್ದೇವೆ ಎಂದು ಫಲಾನುಭವಿಗಳು ತಮ್ಮ ಅಭಿಪ್ರಾಯ ಹೇಳಿಕೊಂಡರು. ಇದೇ ರೀತಿ ವಿವಿಧ ಯೋಜನೆಗಳ ಫಲಾನುಭವಿಗಳು ತಾವು ಪಡೆದ ಸಾಲವನ್ನು ಯಾವ ರೀತಿ ಉಪಯೋಗ ಮಾಡಿಕೊಂಡಿದ್ದೇವೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ ದೇವದಾಸಿ ಪುನರ್ವಸತಿ ಯೋಜನೆಯ ಗೋಪಾಲ್ ನಾಯಕ್, ಮಹಿಳಾ ಮತ್ತು  ಮಕ್ಕಳ ಇಲಾಖೆ ಅಧಿಕಾರಿ ಜಯಶ್ರೀ ಆರ್, ಜಿಲ್ಲಾ ಒಕ್ಕೂಟ ಅಧ್ಯಕ್ಷೆ ಹೇಮಲತಾ, ಮಧುರಾಕರಣ, ಕೃಷ್ಣ ಬಾಪ್ಲೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ, ಮಹಿಳಾ ಸಂಘದ ಮುಖಂಡರು, ವಿವಿಧ ಸಂಸ್ಥೆ, ಯೋಜನೆಗಳ ಫಲಾನುಭವಿಗಳು, ಮಹಿಳೆಯರು ಸೇರಿದಂತೆ ಉಪಸ್ಥಿತರಿದ್ದರು.