ಅಭಿಮಾನ ತರುವ ಸಾಧನೆ ಮಾಡಿ : ಡಾ.ಶಂಭು ಬಳಿಗಾರ

ಅಭಿಮಾನ ತರುವ ಸಾಧನೆ ಮಾಡಿ : ಡಾ.ಶಂಭು ಬಳಿಗಾರ Make achievements that bring pride: Dr. Shambhu Baligara

                ರಬಕವಿ-ಬನಹಟ್ಟಿ 19: ಮರಾಠಿಮಯ ಪ್ರದೇಶದಲ್ಲಿ ಕನ್ನಡದ ಕಂಪು ಪಸರಿಸಲು ಅಂದಿನ ಸಾಂಗಲಿ ಸಂಸ್ಥಾನಿಕರ ಮನವೊಲಿಸಿ ರಬಕವಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡದ ಕಿಚ್ಚು ಹೊತ್ತಿಸಿದ ತ್ಯಾಗಜೀವಿ ಮಡಿವಾಳಪ್ಪ ಪಟ್ಟಣ ತಮ್ಮ ಬಡತನದಲ್ಲೂ ವ್ಯಾಪಾರಿಯಾಗಿ ಮುಂಬೈ ಮಹಾನಗರಿಯ ರೋಖಡವಾಲಾ ಹೆಸರಿನಿಂದಲೇ ಅರ್ಜಿತ ಹಣವನ್ನು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶಾಲೆ-ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಸಾರ್ಥಕತೆ ಮೆರೆದರು. ಅಂಥವರ ಬದುಕು ನಮಗೆಲ್ಲ ಪ್ರೇರಣೆಯಾಗಬೇಕು. ನಮ್ಮ ಬಡತನ ನಿವಾರಿಸಲು ಶಿಕ್ಷಣವೊಂದೇ ಪ್ರಬಲ ಅಸ್ತ್ರ ಎಂಬುದನ್ನು ಮಕ್ಕಳು ಅರಿತು ಚೆನ್ನಾಗಿ ಅಭ್ಯಸಿಸಿ ಪಾಲಕರಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಅಭಿಮಾನ ತರುವತ್ತ ಸಾಧನೆ ಮೆರೆಯಬೇಕೆಂದು ಜಾನಪದ ಸಾಹಿತಿ ಡಾ.ಶಂಭು ಬಳಿಗಾರ ಹೇಳಿದರು.

             ಗುರುವಾರ ರಬಕವಿ ಮಡಿವಾಳಪ್ಪ ಪಟ್ಟಣ 76 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಎರಡು ದಿನಗಳ ಕಾಲ ನಡೆದ ಪಟ್ಟಣಪರ್ವ ಸಮಾರಂಭಕ್ಕೆ ಚಾಲನೆ ನೀಡಿ  ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಕೆಗಳಲ್ಲೂ ಪಾಲ್ಗೊಂಡರೆ ಮಾತ್ರ ಪರಿಪೂರ್ಣ ಶಿಕ್ಷಣ ಹೊಂದಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುವ ಮೂಲಕ ಸಾಧನೆಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಕೂಡ ಸಂಕುಚಿತ ಕೀಳರಿಮೆ ಮನೋಭಾವನೆಯನ್ನು ಬಿಟ್ಟು, ಪ್ರಮುಖವಾಗಿ ಮೊಬೈಲ್ ಬಳಕೆಯಿಂದ ದೂರವಿದ್ದು ಸಮಯ ಪಾಲನೆ, ಶಿಸ್ತು, ಕಠಿಣ ಪರಿಶ್ರಮದಿಂದ ಉತ್ತಮ ಗುರಿಯನ್ನು ಹೊಂದಿ ಸಾಧನೆಗೆ ಮುಂದಾಗಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಯಲ್ಲೂ ಭಾಗವಹಿಸಬೇಕೆಂದರು. 

           ಸಂಸ್ಥೆಯ ಚೇರ್ಮನ್ ಬಸವರಾಜ ಯಂಡಿಗೇರಿ ಸಮಾರಂಭದ ಅಧ್ಯಕ್ಷತೆೆ ವಹಿಸಿ ಮಾತನಾಡಿ, ಇಂದು ಸಾಧನೆ ಬರೀ ಶ್ರೀಮಂತರಿಗೆ ಮಾತ್ರ ಸೀಮಿತವಾಗಿಲ್ಲ. ಬಡತನದ ದಳ್ಳುರಿ  ಸಾಧನೆಗೆ ಪ್ರೇರಣೆಯಾಗಿದೆ. ಪೋಷಕರು ಕೇವಲ ಅಂಕಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು, ನಿಮ್ಮ ಮಕ್ಕಳು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದು, ಪ್ರೋತ್ಸಾಹ ನೀಡಿದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸದಿಂದ ಸಾಧನೆಗೆ ಮುಂದಾಗುತ್ತಾರೆಂದರು.  

           ಕಾರ್ಯಕ್ರಮದಲ್ಲಿ ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿಭಾಗಗಳಲ್ಲಿ ಸಾಧನೆ ಮೆರೆದ ಮಕ್ಕಳಿಗೆ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಎಂ.ಎಸ್‌.ಬದಾಮಿ, ವೀರೇಶ ಹೊಸಮನಿ, ಚಿದಾನಂದ ಗಾಳಿ, ಚಿದಾನಂದ ಸೊಲ್ಲಾಪುರ, ಎಸ್‌.ಜಿ.ಭಿಲವಡಿ, ಆರ್‌.ಜಿ.ಭಿಲವಡಿ, ಬಿ.ಎಂ.ಮಟ್ಟಿಕಲ್ಲಿ, ರಜನೀಕಾಂತ ಜೋಗಳೆ, ಪ್ರಕಾಶ ಕೊಣ್ಣೂರ, ಎಂ.ಕೆ.ಮುರಗೋಡ, ಪ್ರಾಚಾರ್ಯ ಬಿ.ಎಸ್‌.ಕಾಂಬಳೆ, ಪಿ.ಎಚ್‌. ಪ್ರತಾಪ, ಜಿ.ಎಸ್‌. ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು.ರಾಜೇಶ ನೋಟದ ನಿರೂಪಿಸಿದರು, ಎಂ. ಎಸ್‌. ಕೊಣ್ಣೂರ ವಂದಿಸಿದರು.