ಗ್ರಾಮೀಣ ಮಟ್ಟದಲ್ಲೂ ಮಹಿಳಾ ಉತ್ಸವ ಆಯೋಜಿಸಿ : ಜಯಶ್ರೀ ಮೊಗೇರ
ಕಾರವಾರ : ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ನಡೆಸುವ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿ ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಕಾಶ ಕಲ್ಪಿಸಿಕೊಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಹೇಳಿದರು.
ಮಂಗಳವಾರ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಮಹಿಳಾ ಸಾಂಸ್ಕ್ರತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಪ್ರತಿ ವರ್ಷ ಕೇವಲ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದ ಮಹಿಳಾ ಕಲಾವಿದರು ಉತ್ಸವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಿಗಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯ ಪ್ರತಿ ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಇಂತಹ ಮಹಿಳಾ ಉತ್ಸವಗಳನ್ನು ಆಯೋಜಿಸಿದಲ್ಲಿ ಮಹಿಳೆಯರಲ್ಲಿ ಅಡಗಿರುವಂತ ಪ್ರತಿಭೆ ಹೊರಹೊಮ್ಮಲು ವೇದಿಕೆ ಕಲ್ಪಿಸದಂತಾಗುತ್ತದೆ ಎಂದರು.
ಇಡೀ ದೇಶಕ್ಕೆ ಜಿಲ್ಲೆಯ ಜಾನಪದ ಕಲೆ, ಸಾಹಿತ್ಯವನ್ನು ಪರಿಚಯಿಸಿದ ಹಾಗೂ ಪದ್ಮಶ್ರೀ ಪಡೆದ ಸುಕ್ರಿ ಬೊಮ್ಮು ಗೌಡ, ತುಳಸಿ ಗೌಡ ಅವರಂತ ಮಹಿಳಾ ಕಲಾವಿದರ ಮಧ್ಯೆ ಜೀವಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಆಸಕ್ತಿ ತೋರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಚೈತ್ರಾ ಕೋಠಾರಕರ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಮಹಿಳಾ ಸಾಂಸ್ಕೃತಿಕ ಉತ್ಸವ ಆಯೋಜಿಸಿರುವುದು ಖುಷಿಯ ಸಂಗತಿ. ಇತ್ತೀಚೆಗೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಆಸಕ್ತಿ ತೋರಿಸಿ ಪುರುಷರಿಗಿಂತಲೂ ಉತ್ತಮ ಸಾಧನೆ ತೋರುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಕಲಾ ಆಸಕ್ತಿಯಿದ್ದು, ಸಿಗುವ ಅವಕಾಶಗಳ ಸದುಪಯೋಗವನ್ನು ಸರಿಯಾಗಿ ಪಡೆಯಬೇಕು ಎಂದರು.
ಉತ್ಸವ ಉದ್ಘಾಟನೆಗೂ ಮುನ್ನ ಮಹಾ ದಾರ್ಶನಿಕ ವೇಮನ ಜಯಂತಿ ಅಂಗವಾಗಿ ವೇಮನರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮು ಗೌಡ, ತುಳಸಿ ಗೌಡ ಅವರಿಗೆ ಸನ್ಮಾನಿಸಲಾಯಿತು.
ನಂತರದಲ್ಲಿ ಶಿಕ್ಷಕಿ ಶ್ರೀದೇವಿ ಮಹಿಳೆಯರ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಬಾರ ಸಹಾಯಕ ನಿರ್ದೇಶಕ ಎನ್.ಜಿ. ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.