ಬೆಂಗಳೂರು,ಫೆ 01: ಪ್ರಾಣ ಬೇಕಾದರೂ ಬಿಡ್ತಾರೆ ಯಡಿಯೂರಪ್ಪ, ಮಾತು ತಪ್ಪೊಲ್ಲ ಅನ್ನೋ ಮಾತಿದೆ. ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಬಗ್ಗೆ ಮಾತನಾಡುತ್ತಾ, ಯಡಿಯೂರಪ್ಪ ಕೊಟ್ಟ ಮಾತು ಯವತ್ತೂ ತಪ್ಪಲ್ಲ ಎಂಬುದನ್ನು ವಿರೋಧಿಗಳು ಕೂಡ ಹೇಳ್ತಾರೆ. ಚುನಾವಣೆ ಪ್ರಚಾರದ ವೇಳೆ 35 ಸಾವಿರ ಜನರ ಮುಂದೆ ಯಡಿಯೂರಪ್ಪ ಶ್ರೀಮಂತ ಪಾಟೀಲ್, ನನಗೆ ಮಂತ್ರಿ ಮಾಡ್ತೀನಿ ಅಂತ ಹೇಳಿದ್ರು. ಯಡಿಯೂರಪ್ಪ ಮಂತ್ರಿ ಮಾಡೋದಾಗಿ ಜನರ ಮುಂದೆಯೇ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾತು ತಪ್ಪೊಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದೂವರೆ ವರ್ಷ ನಾವು ಹುಲಿ ಬಾಯಿಗೆ ತಲೆ ಕೊಟ್ಟ ಪರಿಸ್ಥಿತಿ ಇತ್ತು. ಆಮೇಲೆ ನಾವು ಗೆದ್ದೆವು ಯಡಿಯೂರಪ್ಪ ಸಿಎಂ ಆದರು. ನಮ್ಮನ್ನ ಕೈ ಬಿಡ್ತಾರೆ ಅನ್ನೊ ಆತಂಕ ನಮಗೆ ಇಲ್ಲ. ಒಂದು ವೇಳೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಆಗುತ್ತದೆ. 100 ಕ್ಕೆ 100 ಮಂತ್ರಿ ಸ್ಥಾನ ಸಿಗುತ್ತೆ ಅನ್ನೊ ವಿಶ್ವಾಸ ಇದೆ ಎಂದು ವಿವರಿಸಿದರು.
ಅಥಣಿ ಕ್ಷೇತ್ರದಲ್ಲಿ ಪ್ರಚಾರದಲ್ಲೇ ಮಂತ್ರಿಗಿರಿ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಕಾಗವಾಡದ ಶ್ರೀಮಂತ ಪಾಟೀಲ್ ಮತ್ತು ನನ್ನನ್ನು ಮಂತ್ರಿ ಮಾಡ್ತೇನೆ ಅಂತ ಹೇಳಿದ್ದರು. ವೇದಿಕೆ ಮೇಲೆ ಸ್ವಯಂಪ್ರೇರಿತವಾಗಿ ಹೇಳಿದ್ದರು. ಸಚಿವರ ಪಟ್ಟಿಯಲ್ಲಿ ನಾನಿದ್ದೇನೋ, ಇಲ್ಲವೋ ಅಂತ ಕೇಳುವುದು ಸಣ್ಣತನ. ರಮೇಶ್ ಜಾರಕಿಹೊಳಿಗೆ ಡಿಸಿಎಂ ಕೊಡಬೇಕು ಎಂದಿದ್ದೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದಿದ್ದೆ ಎಂದು ಇದೇ ವೇಳೆ ತಿಳಿಸಿದರು.