ಬೆಂಗಳೂರು, ಫೆ.28 : ಮಹದಾಯಿ ಕುಡಿಯುವ ನೀರಿಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಬೇಕಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಶೀಘ್ರದಲ್ಲಿ ಕಾವೇರಿ ಕಳಸಾ ಬಂಡೂರಿ ಕೃಷ್ಣಾಮೇಲ್ದಂಡೆ ಸಮಸ್ಯೆಯನ್ನೂ ಸಹ ಬಗೆಹರಿಸಲಾಗುವುದು. ಈ ಸಂದರ್ಭದಲ್ಲಿ ವಿಜಯೋತ್ಸವ ಬೇಡ. ಎಲ್ಲಾ ವಿವರಗಳನ್ನು ಅಧ್ಯಯನ ಮಾಡಿ ಬಳಿಕ ಹೆಚ್ಚಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದಕ್ಕೆ ಸ್ಪಂದನೆ ದೊರೆತಿದೆ. ಹೀಗಾಗಿ ಕೇಂದ್ರದ ಮೋದಿ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನ್ಯಾಯಮಂಡಳಿ ಆದೇಶದಂತೆ ಯೋಜನೆ ಜಾರಿ ಮಾಡುತ್ತೇವೆ. ಶೀಘ್ರವಾಗಿ ಕಾಮಗಾರಿ ಮುಂದುವರಿಸುತ್ತೇವೆ ಎಂದರು.
ಸುಪ್ರೀಂ ಅದೇಶಕ್ಕೂ ಮೊದಲೇ ತಾವು ಹಾಗೂ ಜಗದೀಶ್ ಶೆಟ್ಟರ್ ಮಹದಾಯಿಗೆ ೨೦೦ ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಇನ್ನೂ ಹದಿನೈದು ದಿನಗಳ ಕಾಲ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲಿ ಸಾಧ್ಯವಿಲ್ಲ. ಮೂರು ಇಲಾಖೆಗಳ ಪರವಾನಿಗೆ ಬೇಕಾಗಿದೆ. ಜಲಸಪನ್ಮೂಲ ಇಲಾಖೆ ಮುಖ್ಯಮಂತ್ರಿಗಳಿಗೆ ಬಹಳ ಅಪ್ಯಾಯಮಾನವಾದ ಇಲಾಖೆ. ಜಲಸಂಪನ್ಮೂಲ ಇಲಾಖೆಗೆ ಈ ಬಾರಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಮಹಾದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಅವರ ತ್ಯಾಗ ಹೋರಾಟದಿಂದಲೇ ಈ ಜಯ ಸಿಕ್ಕಿದೆ ಎಂದರು.
ಕಬಿನಿ ನೀರನ್ನು ಕಂಪೆನಿಯೊಂದರ ಪರವಾಗಿ ಹರಿಸಲಾಗುತ್ತದೆ ಎನ್ನುವುದು ಕಂಡುಬಂದಲ್ಲಿ ಅದರ ವಿರುದ್ಧ ಕ್ರಮಜರುಗಿಸಲಾಗುವುದು. ಮೇಕೆದಾಟು ಕಾವೇರಿ ಕೃಷ್ಣಾ ಎಲ್ಲವನ್ನು ಶೀಘ್ರದಲ್ಲಿಯೇ ಬಗೆಹರಿಸುವುದಾಗಿ ಸಚಿವರು ಹೇಳಿದರು.