ರಾಜ್ಯದಲ್ಲೂ ಮಹಾರಾಷ್ಟ್ರ ಹಳ್ಳಿಯ ಅಭಿವೃದ್ಧಿ ಮಾದರಿ ಜಾರಿ

ಬೀದರ್ 28: ಮಹಾರಾಷ್ಟ್ರದ ಮರಾಠವಾಡ ವ್ಯಾಪ್ತಿಯ ಕಡವಂಚಿ ಗ್ರಾಮದ ಅಭಿವೃದ್ಧಿ ಮಾದರಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಕೂಡ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ 

 ಶುಕ್ರವಾರ ಬೆಳಗ್ಗೆ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮರಾಠವಾಡದ ಹಳ್ಳಿಯು ನಮಗೆ ಮಾದರಿಯಾಗಬೇಕಿದೆ, ಅಲ್ಲಿನ ಬದಲಾವಣೆಯನ್ನು ನಾನು ಕಂಡಿದ್ದೇನೆ, ಇಂತಹ ಬರಗಾಲದಲ್ಲೂ ಅಲ್ಲಿನ ಜನ ನೀರು ಉಳಿಸಿಕೊಂಡಿದ್ದಾರೆ, ಅವರ ಆದಾಯದ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ, ಅಂತಹ ವಾತಾವರಣವನ್ನು ಇಲ್ಲಿ ಕೂಡ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು 

  ಗ್ರಾಮವಾಸ್ತವ್ಯ ಕಾರ್ಯಕ್ರಮ ಹೊರತು ಪಡಿಸಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇನೆ ಎಂದು ಅವರು  ಘೋಷಿಸಿದರು 

  ಇಡೀ ರಾಜ್ಯದ 30 ಜಿಲ್ಲೆಗಳಲ್ಲಿ ಆಯಾ ಭಾಗದಲ್ಲಿ ಒಂದೊಂದು ಹಳ್ಳಿಯನ್ನು ಆಯ್ಕೆಮಾಡಿಕೊಂಡು ನಾವೇ ಖುದ್ದು ಸಕರ್ಾರದ ಮೂಲಕ ಅವರಿಗೆ ತಿಳಿವಳಿಕೆ ಕೊಡುವ ಕಾರ್ಯಕ್ರಮ ರೂಪಿಸುತ್ತೇವೆ, ಕಡವಂಚಿ ಗ್ರಾಮದ ಜಲಕ್ರಾಂತಿಯ ಮಾದರಿಯನ್ನು ಅವರಿಗೆ ಹೇಳುತ್ತೇವೆ, ಈ ಮೂಲಕ ಆ ಹಳ್ಳಿಯ ರೈತರ ಕೃಷಿ ಪದ್ದತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು 

  ಬರೀ ಸರ್ಕಾರದಿಂದ ಕಾರ್ಯಕ್ರಮ ಕೊಟ್ಟರೆ ಆಗುವುದಿಲ್ಲ, ಜನರ ಪಾಲ್ಗೊಳ್ಳುವಿಕೆ ಕೂಡ ಮುಖ್ಯ, ರೈತರು ಕೃಷಿ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ, ಈ ವಿಷಯದಲ್ಲಿ ರೈತರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ವಾರ್ತಾ  ಇಲಾಖೆಯಿಂದ ಮಹಾರಾಷ್ಟ್ರದ ಮರಾಠವಾಡದ ಕಡವಂಚಿ ಹಳ್ಳಿಯ ಜಲಕ್ರಾಂತಿಯ ಚಿತ್ರಣದ ವಿಡಿಯೊವನ್ನು ತೋರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು 

  ಯಾವ ಹಳ್ಳಿಯಲ್ಲಿ ನೂರು ಜನರ ಕೋ ಆಪರೇಟಿವ್ ಪಾರ್ಮ ಮಾಡಿಕೊಳ್ಳುತ್ತಾರೋ ಅವರಿಗೆ ಒಂದು ಕೋಟಿ ರೂಪಾಯಿ ಸಬ್ಸಿಡಿಯನ್ನು ಸರಕಾರದಿಂದ ನೀಡುತ್ತಿದ್ದೇವೆ ಎಂದು ತಿಳಿಸಿದರು 

  ಈ ವೇಳೆ ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಶಾಸಕರಾದ ಬಿ ನಾರಾಯಣರಾವ್, ಜಿಲ್ಲಾಧಿಕಾರಿಗಳಾದ ಡಾ ಎಚ್ ಆರ್ ಮಹಾದೇವ, ಸಿಇಓ ಮಹಾಂತೇಶ ಬೀಳಗಿ, ಎಸ್ಪಿ ಟಿ ಶ್ರೀಧರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ,  ಸಹಾಯಕ ಆಯುಕ್ತರಾದ ಗ್ಯಾನೇಂದ್ರಕುಮಾರ ಗಂಗವಾರ, ಶಂಕರ ವಣಕ್ಯಾಳ, ತಹಸೀಲ್ದಾರ್ ಸಾವಿತ್ರಿ ಸಲಗರ ಉಪಸ್ಥಿತರಿದ್ದರು.