ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು; ಸೋನಿಯಾ ಭೇಟಿಯಾಗಲಿರುವ ಶರದ್ ಪವಾರ್

ನವದೆಹಲಿ, ನ 4:   ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾ ಗಾಂಧಿ  ಅವರನ್ನು   ರಾಷ್ಟ್ರೀಯವಾದಿ  ಕಾಂಗ್ರೆಸ್  ಪಕ್ಷದ ಅಧ್ಯಕ್ಷ   ಶರದ್ ಪವಾರ್  ಇಂದು ಭೇಟಿ ಮಾಡಲಿದ್ದಾರೆ  ಎಂದು ಉನ್ನತ ಮೂಲಗಳು ಹೇಳಿವೆ.    ಮಹಾರಾಷ್ಟ್ರದಲ್ಲಿ  ನೂತನ ಸರ್ಕಾರ ರಚಿಸುವಲ್ಲಿ  ಬಿಜೆಪಿ- ಶಿವಸೇನಾ  ಮೈತ್ರಿಕೂಟ ಒಂದೊಮ್ಮೆ ವಿಫಲವಾದರೆ,  ಶಿವಸೇನೆಯನ್ನು ಬೆಂಬಲಿಸಲು  ಕಾಂಗ್ರೆಸ್  ಹಾಗೂ ಎನ್ ಸಿ ಪಿ  ಅಲೋಚನೆ ನಡೆಸಿವೆ ಎಂಬ ದಟ್ಟ ವದಂತಿಗಳು  ಹರಡಿವೆ. ಮಹಾರಾಷ್ಟ್ರದಲ್ಲಿ  ಅಧಿಕಾರ  ಹಂಚಿಕೆ ಹಾಗೂ ಸರ್ಕಾರ ರಚನೆ ಸಂಬಂಧ  ಬಿಜೆಪಿ  ಹಾಗೂ ಶಿವಸೇನೆಯ  ನಡುವೆ  ಹಗ್ಗಾ ಜಗ್ಗಾಟ ಮುಂದುವರಿದಿದ್ದು, ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿವೆ. ಬಿಜೆಪಿ ನಾಯಕರು  ಸಹ ದೆಹಲಿಯಲ್ಲಿ ಇಂದು  ಸಭೆ ನಡೆಸಲಿದ್ದಾರೆ.  ಬಿಜೆಪಿ ಹಾಗೂ ಶಿವಸೇನಾ  ತಮ್ಮ   ತಮ್ಮ ನಿಲುವುಗಳಿಗೆ ಬಿಗಿ ಪಟ್ಟು  ಹಿಡಿದಿರುವ  ಕಾರಣ ಮಹಾರಾಷ್ಟ್ರದಲ್ಲಿ  ಸರ್ಕಾರ ರಚನೆಯ  ರಾಜಕೀಯ ನಾಟಕ  ಮುಂದುವರಿದಿದೆ. ಬಿಜೆಪಿಯ ಹಳೆಯ ಮಿತ್ರ ಪಕ್ಷವಾಗಿರುವ  ಶಿವಸೇನಾ  ಕಳೆದ ತಿಂಗಳು ನಡೆದರಾಜ್ಯ  ವಿಧಾನಸಭಾ ಚುನಾವಣೆಯಲ್ಲಿ  56 ಸ್ಥಾನಗಳಲ್ಲಿ ಗೆಲುವು  ಸಾಧಿಸಿದ್ದು, ಎರಡೂವರೆ ವರ್ಷ ತನಗೂ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು ಎಂದು   ಅದು ತನ್ನ ಮಿತ್ರ ಪಕ್ಷ ಬಿಜೆಪಿಯ ಮೇಲೆ ಬಿಗಿ ಪಟ್ಟು  ಹಿಡಿದಿದೆ. ಎನ್ ಸಿ ಪಿ  ಯನ್ನು  ಮನವೊಲಿಸುವ ಸಂಬಂಧ  ತನ್ನ ಪ್ರಯತ್ನ   ಶಿವಸೇನಾ ಮುಂದುವರಿಸಿದ್ದು,  ಪಕ್ಷದ ಹಿರಿಯ ನಾಯಕ  ಸಂಜಯ್ ರಾವತ್,   ಈ ಸಂಬಂಧ   ಎನ್ ಸಿ ಪಿ   ನಾಯಕ  ಅಜಿತ್ ಪವಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ.