ನೇಪಾಳ-ಟಿಬೆಟ್ ಪ್ರವಾಹದಲ್ಲಿ ಮಹಾರಾಷ್ಟ್ರದ 80ಕ್ಕೂ ಹೆಚ್ಚು ನಾಗರಿಕರು ಸಿಲುಕಿರುವ ಮಾಹಿತಿ

ನೇಪಾಳ-ಟಿಬೆಟ್ ಪ್ರವಾಹದಲ್ಲಿ ಮಹಾರಾಷ್ಟ್ರದ 80ಕ್ಕೂ ಹೆಚ್ಚು ನಾಗರಿಕರು ಸಿಲುಕಿರುವ ಮಾಹಿತಿ Maharashtra Citizens Stranded in Nepal-Tibet Floods

ನೇಪಾಳ-ಟಿಬೆಟ್ ಪ್ರವಾಹದಲ್ಲಿ ಮಹಾರಾಷ್ಟ್ರದ 80ಕ್ಕೂ ಹೆಚ್ಚು ನಾಗರಿಕರು ಸಿಲುಕಿರುವ ಮಾಹಿತಿ; ಸಮನ್ವಯ ಹೆಚ್ಚಿಸಿದ SEOC

ಮುಂಬೈ, ಆ. 27: ಆಗಸ್ಟ್ 26ರಂದು ನೇಪಾಳ-ಟಿಬೆಟ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 80ಕ್ಕೂ ಹೆಚ್ಚು ನಾಗರಿಕರು ಸಿಲುಕಿರುವುದಾಗಿ ವರದಿಯಾಗಿದೆ ಎಂದು ಮಹಾರಾಷ್ಟ್ರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.

ಆಗಸ್ಟ್ 27ರಂದು ಬೆಳಗ್ಗೆ 10 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಈ ಸಂಖ್ಯೆ ನೀಡಲಾಗಿದ್ದು, ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು SEOC ತನ್ನ ಸ್ಥಿತಿಗತಿ ವರದಿಯಲ್ಲಿ ತಿಳಿಸಿದೆ. ಸಿಲುಕಿರುವವರ ಪೈಕಿ 57 ಮಂದಿ ರಿಚಾ ಟೂರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪ್ರಯಾಣಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಲುಕಿರುವ ನಾಗರಿಕರ ಮಾಹಿತಿ ಸಂಗ್ರಹಿಸಲು SEOC ವೆಬ್ ಆಧಾರಿತ ಲಿಂಕ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ವಿವಿಧ ಮಾಧ್ಯಮಗಳ ಮೂಲಕವೂ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಸಿಲುಕಿರುವ ನಾಗರಿಕರ ವಿವರಗಳನ್ನು ಸಂಗ್ರಹಿಸಿ ಪರಿಶೀಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾರ್ವಜನಿಕರ ವಿಚಾರಣೆಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಸಹಾಯವಾಣಿ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಸಹಾಯಕ್ಕಾಗಿ 9321587143, 1070 ಹಾಗೂ 022-22027990 ಸಂಖ್ಯೆಗೆ ಸಂಪರ್ಕಿಸಬಹುದು.

57 ನಾಗರಿಕರ ಪ್ರಯಾಣದ ವ್ಯವಸ್ಥೆ ಮಾಡಿದ್ದ ರಿಚಾ ಟೂರ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ SEOC ಸಂಪರ್ಕ ಸಾಧಿಸಿದೆ. ಈವರೆಗೆ ನಾಲ್ವರು ನಾಗರಿಕರು ಸುರಕ್ಷಿತವಾಗಿರುವುದು ದೃಢಪಟ್ಟಿದ್ದು, ವೆಬ್ ಆಧಾರಿತ ನಮೂನೆಯ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.

ಜಿಲ್ಲಾಡಳಿತಗಳ ಮೂಲಕ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು. ಪ್ರವಾಸ ಸಂಸ್ಥೆಗಳು ಹಾಗೂ ಸಿಲುಕಿರುವ ನಾಗರಿಕರ ಕುಟುಂಬಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುವುದು. ಲಭ್ಯವಿರುವ ಮಾಹಿತಿಯನ್ನು ನವದೆಹಲಿಯ ಕೇಂದ್ರ ಗೃಹ ಸಚಿವಾಲಯದ ಇಂಟಿಗ್ರೇಟೆಡ್ ಕಂಟ್ರೋಲ್ ರೂಂ–ಎಮರ್ಜೆನ್ಸಿ ರೆಸ್ಪಾನ್ಸ್ಗೆ ಹಂಚಿಕೊಳ್ಳಲಾಗುವುದು ಎಂದು SEOC ತಿಳಿಸಿದೆ.