ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಉಪನ್ಯಾಸ

ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಉಪನ್ಯಾಸ  Lecture to create social awareness among the youth

ಲೋಕದರ್ಶನ ವರದಿ 

ಗದಗ, ಆ.27: ಕೆ.ಎಲ್‌.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಹಾಗೂ ಶಿಕ್ಷಣ ಭಾರತಿ ಮತ್ತು ಮೇರಾ ಭಾರತ್ ಮಹಾನ್ ಸಹಯೋಗದಲ್ಲಿ ‘ಯುವ ಜಾಗೃತಿ ಉಪನ್ಯಾಸ ಕಾರ್ಯಕ್ರಮ’ವನ್ನು ಆಯೋಜಿಸಲಾಯಿತು.  

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ವಕೀಲ ಗುರುಲಿಂಗಯ್ಯ ರೇಶ್ಮಿ, ಬಾಲ ನ್ಯಾಯ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಯುವಜನರಲ್ಲಿ ಜಾಗೃತಿ, ಸಾಮಾಜಿಕ ಹೊಣೆಗಾರಿಕೆ, ದೇಶಭಕ್ತಿ, ಉತ್ತಮ ನಾಗರಿಕ ಗುಣಗಳು ಹಾಗೂ ಸಮಾಜಮುಖಿ ಚಿಂತನೆಯ ಅಗತ್ಯವನ್ನು ಅವರು ವಿವರಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಕೆ. ಮಠ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿಕ್ಷಣ ಭಾರತಿ, ಗದಗದ ಚಂದ್ರು ಕುಂದಗೋಳ ಅವರು ಉಪಸ್ಥಿತರಿದ್ದು, ಯುವಜನರ ಪಾತ್ರ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಜವಾಬ್ದಾರಿಗಳ ಕುರಿತು ಮಾತನಾಡಿದರು.  

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಜು ಯಲಬುರ್ಗಿ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ವಿಭಾಗದ ಬೋಧಕ ಸಿಬ್ಬಂದಿ ಹಾಗೂ ಸುಮಾರು 80 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  

ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ, ದೇಶಪ್ರೇಮ, ಕರ್ತವ್ಯ ಪ್ರಜ್ಞೆ ಹಾಗೂ ಉತ್ತಮ ನಾಗರಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.