ವಿಶ್ವಕರ್ಮ ಜಯಂತಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

ವಿಶ್ವಕರ್ಮ ಜಯಂತಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ  Instructions issued to take necessary measures for the celebration of Vishwakarma Jayanti


ಗದಗ, ಆ.27: ಸೆಪ್ಟೆಂಬರ್ 17ರಂದು ನಡೆಯಲಿರುವ ವಿಶ್ವಕರ್ಮ ಜಯಂತಿಯನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್‌. ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಅಂಗವಾಗಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಶಿಷ್ಟಾಚಾರದನ್ವಯ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರಿಗೆ ಆಹ್ವಾನ ನೀಡಬೇಕು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿಶ್ವಕರ್ಮ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.  

ವಿಶ್ವಕರ್ಮರ ಜೀವನ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಪ್ರತಿಭಾವಂತರು ಹಾಗೂ ಹಿರಿಯರನ್ನು ಗುರುತಿಸಿ ಸನ್ಮಾನಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  

ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ, ಆಸನ, ಕುಡಿಯುವ ನೀರು, ಊಟೋಪಚಾರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ​‍್ಕವಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್‌. ನಿರ್ದೇಶನ ನೀಡಿದರು.  

ಸಭೆಯಲ್ಲಿ ವಿಶ್ವಕರ್ಮರ ಕುರಿತು ಉಪನ್ಯಾಸ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.