ದೇವರಹಿಪ್ಪರಗಿ: ತಾಲೂಕಿನ ಜಾಲವಾದ ಗ್ರಾಮದ ಶ್ರೀ ಮುರುಘೇಂದ್ರ ಶಿವಯೋಗಿಗಳ ಮಹಾ ರಥೋತ್ಸವ ಶನಿವಾರದಂದು ಸಂಭ್ರಮ ಸಡಗರದಿಂದ ಜರುಗಿತು.
ಈ ಭಾಗದ ಜನರ ಆರಾಧ್ಯದೈವ ಶ್ರೀ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಸಂಭ್ರಮದಿಂದ ಶನಿವಾರ ನಡೆಯಿತು. ರಥೋತ್ಸವ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆಯೇ ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಿಸಿದರು. ಜನಸಾಗರ ರಥೋತ್ಸವ ನೋಡಿ ಕಣ್ತುಂಬಿಕೊಂಡಿತು.ಬೆಳಿಗ್ಗೆ ದೇವರಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮಾಡಲಾಯಿತು. ಹೂಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅನ್ನದಾಸೋಹ ನಡೆಯಿತು.ದೇವರಹಿಪ್ಪರಗಿ-ಜಾಲವಾದ ಗದ್ದಿಗಿ ಮಠದ ಹಿರಿಯ ಶ್ರೀಗಳಾದ ಮಡಿವಾಳೇಶ್ವರ ಮಹಾಸ್ವಾಮಿಗಳು, ಮಸಬಿ ನಾಳದ ಶ್ರೀಗಳು, ಚಡಚಣದ ಶ್ರೀಗಳು ಹಾಗೂ ಶ್ರೀ ಮಠದ ಕಿರಿಯ ಶ್ರೀಗಳಾದ ಮಹಾಂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ- ಮೇಳಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಇನ್ನು ಜಾತ್ರೆಗೆ ಸಾವಿರಾರು ಭಕ್ತರ ದಂಡು ಭಾಗಿಯಾಗಿದ್ದು, ಸಂಜೆ 5.30 ಗಂಟೆಗೆ ಸಲ್ಲುವ ಶುಭಮುಹೂರ್ತದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಉತ್ಸವ ಮೂರ್ತಿಗಳನ್ನ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು.ಡೊಳ್ಳು ಕುಣಿತ, ಸಕಲ ವಾದ್ಯ ತಂಡಗಳು ಜಾತ್ರೆಗೆ ಮೆರೆಗು ನೀಡಿದವು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ದರು.ಸಾಯಂಕಾಲ ಸಾವಿರಾರು ಭಕ್ತರ ನಡುವೆ ಅದ್ದೂರಿ ರಥೋತ್ಸವ ಸಂಪನ್ನಗೊಂಡಿತ್ತು.ಜಾಲವಾದ ಇಬ್ರಾಹಿಂಪುರ ಹಾಗೂ ದೇವರಹಿಪ್ಪರಗಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ರು.