ಡೆಫ್ ಎಕ್ಸ್ ಪೋ: ರಕ್ಷಣಾ ಸಂಬಂಧ ವೃದ್ಧಿ ಕುರಿತು ಮಡಗಾಸ್ಕರ್ ರಕ್ಷಣಾ ರಾಜನಾಥ್ ಸಿಂಗ್ ಚರ್ಚೆ

ಲಕ್ನೋ, ಫೆ 6,  ಸಾಗರ ಭದ್ರತಾ ವಲಯದಲ್ಲಿ ಸಹಕಾರ ಬಾಂಧವ್ಯವನ್ನು ವೃದ್ಧಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಮಡಗಾಸ್ಕರ್ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಜನರಲ್ ಲಿಯಾನ್ ಜೀನ್ ರಿಚರ್ಡ್ ರಾಕೋಟೊನಿರಿನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಚರ್ಚೆಯ ವೇಳೆ ರಾಜನಾಥ್ ಸಿಂಗ್ ಅವರು ಸಾಗರ ಭದ್ರತಾ ಸಹಕಾರ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಪ್ರತಿಪಾದಿಸಿದರು.

ವ್ಯಾಪಾರ ಮತ್ತು ವಾಣಿಜ್ಯ-ವಹಿವಾಟು ಅಭಿವೃದ್ಧಿ ಹೊಂದಲು ಸುರಕ್ಷಿತ ಸಾಗರ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಉಭಯ ದೇಶಗಳಿಗೆ ಇದೆ  ಎಂದು ಅವರು ಹೇಳಿದರು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ 2018 ರಲ್ಲಿ ಮಡಗಾಸ್ಕರ್‌ಗೆ ಭೇಟಿ ನೀಡಿದ್ದನ್ನು ಪ್ರತಿಪಾದಿಸಿದ ಸಿಂಗ್ ಅವರು, ಈ  ಐತಿಹಾಸಿಕ ಭೇಟಿಯು ಉಭಯ ದೇಶಗಳ ನಡುವಿನ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿದೆ. ಭೇಟಿಯ ವೇಳೆ ಸಹಿ ಹಾಕಿದ ಒಪ್ಪಂದವು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರಕ್ಕೆ ಅನುವು ಮಾಡಿಕೊಡುವ ಚೌಕಟ್ಟು ಒದಗಿಸಿದೆ ಎಂದು ಅವರು ಹೇಳಿದರು.

 ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಉಭಯ ದೇಶಗಳ ಪರಸ್ಪರ ಹಿತಾಸಕ್ತಿಯ ವಿವಿಧ ಕ್ಷೇತ್ರಗಳನ್ನು ಅನ್ವೇಷಿಸಲು ಡೆಫ್ಎಕ್ಸ್ ಪೋ 2020 ( ರಕ್ಷಣಾ ಪ್ರದರ್ಶನ ಮೇಳ) ಎರಡೂ ದೇಶಗಳಿಗೆ ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ರಾಜನಾಥ್ ಸಿಂಗ್  ಆಶಿಸಿದರುಲೆಫ್ಟಿನೆಂಟ್ ಜನರಲ್ ರಾಕೋಟೋನಿರಿನಾ ರಿಚರ್ಡ್ ತಮ್ಮ ಹೇಳಿಕೆಯಲ್ಲಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತದ ದೊಡ್ಡ ಪಾತ್ರವಿದೆ ಎಂದು ಹೇಳಿದರು. ಬರುವ ಜೂನ್ 26 ರಂದು ಮಡಗಾಸ್ಕರ್‌ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸುವಂತೆ ರಾಜನಾಥ್ ಸಿಂಗ್ ಅವರಿಗೆ ರಾಕೋಟೋನಿರಿನಾ ರಿಚರ್ಡ್ ಆಹ್ವಾನಿಸಿದ್ದಾರೆ.