ಸಂಗೀತ, ನೃತ್ಯ ಮನೋರಂಜನೆಗೆ ಸೀಮಿತವಲ್ಲ: ಸಿ.ಟಿ.ರವಿMUSIC IS NOT ONLY DANCE & ENTERTAINMENT
Lokadrshan Daily
1/7/25, 2:09 AM ಪ್ರಕಟಿಸಲಾಗಿದೆ
ಬೆಂಗಳೂರು, ಮಾ 3, ಮನೋವಿಕಾಸಕ್ಕಾಗಿ ಸಂಗೀತ, ನೃತ್ಯ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಆತ್ಮಸಾಕ್ಷಾತ್ಕಾರ ಸಾಧನವಾಗಿದ್ದು, ಅದು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅಭಿಪ್ರಾಯಪಟ್ಟಿದ್ದಾರೆ.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಏರ್ಪಡಿಸಿದ್ದ ೨೦೧೯-೨೦ ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಜನರಿಗಾಗಿ ಹಾಡಿದವರು ಉಳಿಯಲಿಲ್ಲ, ರಾಜನಿಗಾಗಿ ಹಾಡಿದವರು ಉಳಿಯಲಿಲ್ಲ. ಆದರೆ, ಯಾರು ಭಗವಂತನ ಸಾಕ್ಷಾತ್ಕಾರ ಮಾಡಬೇಕೆಂದು ತನ್ನನ್ನೇ ತಾನೆ ಅರ್ಪಿಸಿಕೊಂಡವರು ಉಳಿದರು. ಪುರಂದರದಾಸ, ಕನಕದಾಸರು ಹಾಗೂ ತ್ಯಾಗರಾಜರನ್ನು ನಾವು ಇಂದಿಗೂ ಅವರು ನೆನಪುಗಳು ಮಾಡಿಕೊಂಡು ಗುಣಗಾನ ಮಾಡುತ್ತಿದ್ದೇವೆ. ಸಂಗೀತ ನೃತ್ಯಗಳು ಮನೋರಂಜನೆ ಆಗದೇ, ಮನೋವಿಕಾಸಕ್ಕೆ ಸಾಧನವಾಗಬೇಕು ಎಂದು ಹೇಳಿದರು.ನಮ್ಮ ದೇಶದ ಸಂಸ್ಕೃತಿ ಮತ್ತು ಭಾಷೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಭಾಷೆ ಕಳೆದುಕೊಳ್ಳುವ ಮೂಲಕ ನಮ್ಮ ಎಲ್ಲ ಪರಂಪರೆ ಮತ್ತು ಸಂಸ್ಕೃತಿ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ, ಪ್ರಶಸ್ತಿಗಳು ಪ್ರಧಾನ ಸಮಾರಂಭಕ್ಕೆ ಸೀಮಿತವಾಗದೇ ಭಾಷೆ, ಸಂಸ್ಕೃತಿ ಉಳಿಸುವ ವೇದಿಕೆಗಳಾಗಬೇಕು ಎಂದರು.ಸಂಗೀತ ವಿದ್ಯಾನ್ ಡಾ. ಆರ್.ಕೆ. ಪದ್ಮನಾಭ ಮಾತನಾಡಿ, ಸುಮಾರು ೧೫-೧೬ ನೇ ಶತಮಾನದಲ್ಲಿ ಹರಿದಾಸ, ಪುರಂದರದಾಸ ಹಾಗೂ ಕನಕದಾಸರು ಹುಟ್ಟದೇ ಹೋಗಿದ್ದರೆ ಇವತ್ತು ಸಂಗೀತ ಮತ್ತು ವಿವಿಧ ರೀತಿಯ ಶಾಸ್ತ್ರೀಯ ಸಂಗೀತಗಳು ನಮ್ಮ ಕೈಗೆ ಸಿಗುತ್ತಿರಲಿಲ್ಲ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಭಾರತದ ಸಂಸ್ಕೃತಿಯ ಎರಡು ಕಣ್ಣಗಳು ಇದ್ದಂತೆ. ಕಲಾಶ್ರೀ ಪ್ರಶಸ್ತಿಗೆ ಕಲಾವಿದರು ಅರ್ಜಿ ಹಾಕಬೇಡಿ, ಕಲಾವಿದರನ್ನು ಸರ್ಕಾರವು ಗುರುತಿಸಿ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದರು.ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು. ಜತೆಗೆ ಗಮಕ ಮತ್ತು ಕಥಾ ಕೀರ್ತನೆಗಳು ಇವತ್ತು ಅಳಿವಿನಂಚಿನಲ್ಲಿ ಇವೆ, ಹಾಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಆನೂರು ಅನಂತಕೃಷ್ಣ ಶರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ಜಿಲ್ಲಾ ಉತ್ಸವ ಅಥವಾ ಯಾವುದಾದರೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಅಕಾಡೆಮಿಯಲ್ಲಿರುವ ೬ ವಿಭಾಗಗಳಲ್ಲಿ ಕನಿಷ್ಠ ೩ ವಿಭಾಗಗಳಲ್ಲಾದರೂ ಅವಕಾಶ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.ಮತ್ತೂರು ಗೋಪಾಲ್, ಬಿ. ನಾಗರಾಜು ಅವರಿಗೆ ೨೦೧೯-೨೦ನೇ ಸಾಲಿನ ಕರ್ನಾಟಕ ಗೌರವ ಕಲಾಶ್ರೀ ಪ್ರಶಸ್ತಿ ಹಾಗೂ ಡಾ.ಆರ್.ಎಸ್. ನಂದಕುಮಾರ್, ಎಂ.ಟಿ. ರಾಜಕೇಸರಿ, ಎಂ.ಎನ್. ಗಣೇಶ್, ಫಕಿರೇಶ ಕಣವಿ, ಎಸ್. ಬಾಲೇಶ್, ಎಂ.ನಾಗೇಶ್, ಶಶಿಕಲಾ ದಾನಿ, ಕಮಲಾ ಬಟ್, ಎ. ಅಶೋಕ್ಕುಮಾರ್, ಡಾ ಶುಭಾಂಗಿ, ಕೆ.ಎಸ್. ಸುರೇಖಾ, ಡಾ.ಡಿ.ಪಿ. ಜ್ಯೋತಿ ಲಕ್ಷ್ಮಿ, ರಾಮಸುಬ್ರಾಯ ಶೇಟ್, ಬಸವಣ್ಣಯ್ಯ ಶಾಸ್ತ್ರಿಗಳು, ನರಸಿಂಹದಾಸ್ ಮತ್ತು ಓಂಕಾರನಾಥ್ ಗುಲ್ವಾಡಿ ಅವರಿಗೆ ವಾರ್ಷಿಕ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.