ನವದೆಹಲಿ, ಜ 28 : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಇತ್ತೀಚೆಗೆ ಮುರಿದಿದ್ದಾರೆ. ಇಂದು ಇಲ್ಲಿನ ಸೆಡಾನ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು.
ನ್ಯೂಜಿಲೆಂಡ್ ವಿರುದ್ಧ 27 ಎಸೆತಗಳಲ್ಲಿ 38 ರನ್ ಗಳಿಸಿದ ವಿರಾಟ್ ಕೊಹ್ಲಿ, ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ನಾಯಕ ಎಂಬ ಸಾಧನೆಗೆ ಭಾಜನರಾದರು. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ರನ್ ಮಶೀನ್ ಹಿಂದಿಕ್ಕಿದರು. ಧೋನಿ ಹಿಂದಿಕ್ಕಲು ಕೊಹ್ಲಿಗೆ ಕೇವಲ 25 ರನ್ ಅಗತ್ಯವಿತ್ತು. ಆದರೆ, ನಾಯಕ 38 ರನ್ ಗಳಿಸಿದರು.
ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ನಾಯಕರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ (1,273) ಅಗ್ರ ಸ್ಥಾನ ಹಾಗೂ ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (1,148) ಇದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ(1126) ಮೂರನೇ ಸ್ಥಾನದಲ್ಲಿದ್ದಾರೆ. ಧೋನಿ(1112) ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 2-0 ಮುನ್ನಡೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಿಗೆ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ. ನ್ಯೂಜಿಲೆಂಡ್ ತಂಡಕ್ಕೆ 180 ರನ್ ಗುರಿ ನೀಡಿದೆ.