ಎಂಫಿಎಚ್ ವಿದ್ಯಾರ್ಥಿನಿ ವಸತಿ ನಿಲಯದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ

ಎಂಫಿಎಚ್ ವಿದ್ಯಾರ್ಥಿನಿ ವಸತಿ ನಿಲಯದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ  MPH student found dead in hostel

ಗದಗ 24: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ  ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರು ಗುರುವಾರ ರಾತ್ರಿ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ರಾತ್ರಿ ಸುಮಾರು 8.30ರ ಬಳಿಕ ತಮ್ಮ ಕೊಠಡಿಗೆ ತೆರಳಿದ್ದ ವಿದ್ಯಾರ್ಥಿನಿ, ರಾತ್ರಿ 11 ಗಂಟೆಯಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಸಹಪಾಠಿಗಳಿಗೆ ಅನುಮಾನ ಮೂಡಿತು. ತಕ್ಷಣ ವಸತಿ ನಿಲಯದ ವಾರ್ಡನ್ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.  

ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಕೊಠಡಿಯ ಬಾಗಿಲು ತೆರೆಯಲಾಯಿತು. ಅಲ್ಲಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದರು.  ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯ ನಂತರವೇ ತಿಳಿಯಬೇಕಿದೆ.  ವಿದ್ಯಾರ್ಥಿನಿಯ ನಿಧನದಿಂದ ವಿಶ್ವವಿದ್ಯಾಲಯ ಸಮುದಾಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಲಪತಿ, ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.  

ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯ ಅಗಲಿಕೆ ವಿಶ್ವವಿದ್ಯಾಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಶೋಕ ವ್ಯಕ್ತಪಡಿಸಿದೆ.  ವಿದ್ಯಾರ್ಥಿನಿಯ ನಿಧನದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಶೋಕಾಚರಣೆ ನಡೆಸಿ, ಮೃತರ ಗೌರವಾರ್ಥ ಎಲ್ಲ ಶೈಕ್ಷಣಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ವಿಶ್ವವಿದ್ಯಾಲಯ ಪ್ರಾರ್ಥಿಸಿದೆ.