ಮಡಿಕೇರಿ, ಮಾ.9 ಬಿದಿರು ಬೆಳೆಯುವ ಪ್ರದೇಶದ ವಿಸ್ತೀರ್ಣತೆ ಗಣನೀಯವಾಗಿ ಕುಗ್ಗಿದೆ. ಅದನ್ನು ಮತ್ತೆ ವಿಸ್ತರಿಸಲೇಬೇಕಾದ ತುರ್ತು ಅಗತ್ಯವಿದೆ ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ ಪ್ರತಿಪಾದಿಸಿದರು.ಕೊಡಗು ಜಿಲ್ಲೆ ಪೊನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಇಂದು "ಕೊಡಗಿನಲ್ಲಿ ಬಿದಿರು ಸಂಪನ್ಮೂಲಗಳ ಬೇಸಾಯ ಹಾಗೂ ಬಳಕೆ" ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕೇವಲ ಒಂದೂವರೆ ದಶಕದ ಹಿಂದೆ ಬಿದಿರು ಪ್ರದೇಶದ ವಿಸ್ತೀರ್ಣತೆ 15 ಮಿಲಿಯನ್ ಹೆಕ್ಟೇರ್ ಇತ್ತು. ನಾನಾ ಕಾರಣಗಳಿಂದ ಅದೀಗ 7.79 ಮಿಲಿಯನ್ ಹೆಕ್ಟೇರಿಗೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಬಳಕೆಗಿಂತಕೂ ಹೆಚ್ಚಾಗಿ ನಾನಾ ಹಂತ, ಆಯಾಮಗಳಲ್ಲಿ ಬಿದಿರು ಬಳಕೆ ವ್ಯಾಪ್ತಿ ಹೆಚ್ಚಾಗಿದೆ. ಇದನ್ನು ಕೃಷಿಕರು ಬೆಳೆಸಲು ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದಲ್ಲಿ ಬಿದಿರು ಮಿಷಿನ್ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ಬಿದಿರನ್ನು ಔಷಧ ವಲಯದಲ್ಲಿಯೂ ಬಳಕೆ ಮಾಡಲಾಗುತ್ತದೆ. ಬಿದಿರಿನಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ದೊರೆಯುತ್ತಿದೆ. ಶೀಘ್ರ ಕಟಾವಿವೂ ಬರುವುದರಿಂದ ವಾಣಿಜ್ಯ ಬೆಳೆಯಾಗಿಯೂ ಬೆಳೆಸಲು ಅನುಕೂಲ. ಇಂದು ನಿಜವಾದ ಅರ್ಥದಲ್ಲಿ ಬಿದಿರು ಹಸಿರು ಹೊನ್ನಾಗಿದೆ. ಇದರಿಂದ ರೈತರ ಆದಾಯವೂ ಹೆಚ್ಚುತ್ತದೆ ಎಂದರು.ಕೇವಲ ನಾಲ್ಕು ವರ್ಷದಲ್ಲಿ ಬಿದಿರು ಕಟಾವಿಗೆ ಬರುತ್ತದೆ. ಬಹುಬೇಗ ಕಟಾವಿಗೆ ಬರುವುದರಿಂದ ಉತ್ತಮ ಆದಾಯವೂ ಲಭಿಸುತ್ತದೆ. ಇದನ್ನು ಬೆಳೆಯಲು ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆಯಿರುವ ಈ ಹಸಿರು ಹೊನ್ನನ್ನು ಬೆಳೆಯಲು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಜಂಟಿ ಕಾರ್ಯದರ್ಶಿ ಜಿ.ಕೆ. ವಸಂತ ಕುಮಾರ್ ವಿವರಿಸಿದರು.ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಬಿದಿರನ್ನು ಅತ್ಯುತ್ತಮವಾಗಿ ಬೆಳೆಯಬಹುದು. ಬೆಳೆದ ಬಿದಿರಿಗೆ ಮಾರುಕಟ್ಟೆಯೂ ಇದೆ. ಇದರ ಪ್ರಯೋಜನವನ್ನು ಪಡೆಯಬೇಕಾದ ಅವಶ್ಯಕತೆ ಇದೆ ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದರು. ಅರಣ್ಯ ಕಾಲೇಜಿನ ಪ್ರಾಧ್ಯಾಪಕ, ಬಿದಿರು ಮಿಷನ್ ಸಂಯೋಜಕ ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಾಗಾರದ ಉದ್ದೇಶ ವಿವರಿಸಿದರು. ಕಾಲೇಜಿನ ಡೀನ್ ಸಿ.ಜಿ.ಕುಶಾಲಪ್ಪ, ಉಪಸ್ಥಿತರಿದ್ದರು.ಕಾರ್ಯಾಗಾರದಲ್ಲಿ ಬಿದಿರು ಬೇಸಾಯ, ಬಿದಿರು ಮೌಲ್ಯವರ್ಧನೆ, ಬಿದಿರಿನ ವಿವಿಧ ಉತ್ಪನ್ನಗಳು ಮತ್ತು ಅವುಗಳ ಬಳಕೆ, ಬಿದಿರು ಸಂಸ್ಕರಣೆ - ಮಾರಾಟ ಕುರಿತು ಬೆಳೆಗಾರರು, ಕೃಷಿವಿಜ್ಞಾನಿಗಳ ಉಪನ್ಯಾಸ, ಮಾರುಕಟ್ಟೆ ತಜ್ಞರ ಅನುಭವ ಹಂಚಿಕೆ ಗೋಷ್ಠಿಗಳು ಆಯೋಜಿತವಾಗಿದೆ.ಅತ್ಯುತ್ತಮವಾಗಿ ಬಿದಿರು ಕೃಷಿ ಮಾಡುತ್ತಿರುವ ಪೊನ್ನಂಪೇಟೆ ಸಮೀಪದ ಬೆಳೆಗಾರ ಬಿ. ಸುಬ್ಬಯ್ಯ ಅವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ "ಬಿದಿರು ಕೃಷಿ" ಕೈಪಿಡಿ ಲೋಕಾರ್ಪಣೆ ಮಾಡಲಾಯಿತು.