ಢಾಕಾ, ಮಾ ೯, ತನ್ನ ದೇಶದಲ್ಲಿ ಮೂರು ಕರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಬಾಂಗ್ಲಾದೇಶ ಘೋಷಿಸಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಢಾಕಾ ಭೇಟಿ ರದ್ದುಗೊಳಿಸಬಹುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಈ ಸಂಬಂಧ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಾರ್ಚ್ ೧೭ ರಂದು ಬಾಂಗ್ಲಾ ದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರ ಢಾಕಾ ಭೇಟಿಯನ್ನು ಅಂತಿಮಗೊಳಿಸಲಾಗಿತ್ತು.ಇಟಲಿಯಿಂದ ಢಾಕಾಗೆ ಬಂದಿರುವ ಇಬ್ಬರು ವ್ಯಕ್ತಿಗಳಲ್ಲಿ ಕರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇಬ್ಬರ ಸಂಬಂಧಿಕರೊಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಂಗ್ಲಾದೇಶದಲ್ಲಿ ಕರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಬಾಂಗ್ಲಾದೇಶ ಭೇಟಿ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬ್ರಸೆಲ್ಸ್ ನಲ್ಲಿ ನಡೆಯಲಿರುವ ಭಾರತ- ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲೂ ಪ್ರಧಾನಿ ಭೇಟಿ ರದ್ದಾಗುವ ಸಾಧ್ಯತೆಯಿದೆ. ಬಾಂಗ್ಲಾದೇಶದಲ್ಲಿ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು. ಪ್ರಧಾನಿ ಮೋದಿ ಅವರ ಬಾಂಗ್ಲಾ ಭೇಟಿಯನ್ನು ರದ್ದುಪಡಿಸುವಂತೆ ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.