ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ

ಧಾರವಾಡ, ಆ 17         ಖ್ಯಾತ ಸಂಶೋಧಕ ಎಂ ಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ  

ಸಿಐಡಿ ತನಿಖಾಧಿಕಾರಿಗಳು ತಾವು ಸಂಗ್ರಹಿಸಿರುವ ಪ್ರಬಲ ಸಾಕ್ಷ್ಯಾಧಾರಗಳನ್ನು ಆಧರಿಸಿ ಹತ್ಯೆ ಮಾಡಿರುವ ಆರೋಪಿಗಳ ವಿರುದ್ಧ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ

ಅಮೋಲ್ ಎ, ಕಾಳೆ, ಗಣೇಶ ಮಿಸ್ಕಿನ್, ಪ್ರವೀಣ್ ಪ್ರಕಾಶ್ ಚತುರ್, ವಾಸುದೇವ್ ಭಗವಾನ್ ಸೂರ್ಯವಂಶಿ, ಶರದ್ ಬಾಹುಸಾಹೇಬ್ ಕಳಾಸ್ಕರ್ ಹಾಗೂ ಅಮಿತ್ ಬದ್ಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. 

ಆರೋಪಿಗಳು ಅನಾಮಧೇಯ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸನಾತನ ಸಂಸ್ಥೆ ಪ್ರಕಟಿಸಿರುವ 'ಕ್ಷಾತ್ರ ಧರ್ಮ ಸಾಧನೆ' ಎಂಬ ಪುಸ್ತಕದಲ್ಲಿ ವಿವರಿಸಿದ ಮಾರ್ಗಸೂಚಿಗಳು ಹಾಗೂ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಈ ಕೃತಿಯಲ್ಲಿನ ಧರ್ಮಬೋಧನೆ ಅನುಸಾರ ಚಿಂತಕ ಕಲ್ಬುರ್ಗಿಅವರನ್ನು ಹತ್ಯೆ ಮಾಡಿದ್ದಾರೆ. ತಮ್ಮ ಸಂಘಟನೆಯ ನಂಬಿಕೆ ಮತ್ತು ಸಿದ್ಧಾಂತದ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಇವರು ಹತ್ಯೆ ಮಾಡುತ್ತಿದ್ದರು ಎಂದು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.   

ಈ ಸಂಘಟನೆಯ ಸದಸ್ಯರು ತಮ್ಮ ಉದ್ದೇಶ ಸಾಧನೆಗಾಗಿ, ಹಿಂಸಾತ್ಮಕ ಪ್ರವೃತ್ತಿ ಹಾಗೂ ಆಕ್ರಮಣಕಾರಿ ಮನೋಭಾವವುಳ್ಳ ವ್ಯಕ್ತಿಗಳನ್ನು, ಅದರಲ್ಲಿಯೂ ವಿಶೇಷವಾಗಿ ಅಪರಾಧಿಕ ಹಿನ್ನೆಲೆಯುಳ್ಳವರನ್ನು ಬಹಳ ಜಾಗರೂಕತೆಯಿಂದ ಪತ್ತೆ ಹಚ್ಚಿ ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದರು. 

ಈ ಸಂಘಟನೆಯ ಸದಸ್ಯರು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗೌಪ್ಯವಾಗಿ ಸಭೆ ಸೇರಿ ದೈಹಿಕ ಕ್ಷಮತೆ ಹೆಚ್ಚಿಸುವ ಮತ್ತು ಶಸ್ತ್ರಾಸ್ತ್ರ ತರಬೇತಿ ಪಡೆದುಕೊಳ್ಳುತ್ತಿದ್ದರು. ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿದ್ದುಕೊಂಡು ತಮ್ಮ ಗುರುತನ್ನು ಮರೆಮಾಚಲು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರು. ಈ ಸಂಘದ ಚಟುವಟಿಕೆ ಮತ್ತು ಧ್ಯೇಯೋದ್ದೇಶಗಳ ಸಾಧನೆಗಾಗಿ ತಮ್ಮ ನಿಜ ನಾಮಗಳನ್ನು ಮರೆಮಾಚಿ ಅಡ್ಡ ಹೆಸರುಗಳನ್ನು ಬಳಸುತ್ತಿದ್ದರು. 

2014, ಜೂನ್ 9 ರಂದು ಬೆಂಗಳೂರಿನ ಬನಶಂಕರಿ ವಿಜ್ಞಾನ ಭವನದಲ್ಲಿ ನಡೆದ 'ಮೌಢ್ಯ ಮುಕ್ತ ಸಮಾಜದತ್ತ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಅನುಷ್ಠಾನ - ಒಂದು ಚರ್ಚೆ' ಎಂಬ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಅವರು ತಮ್ಮ ಭಾಷಣದಲ್ಲಿ ಡಾ|| ಯು.ಆರ್. ಅನಂತಮೂರ್ತಿಯವರು ತಮ್ಮ ಪುಸ್ತಕದಲ್ಲಿ ಬರೆದ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ್ದರು. ಈ ವಿಚಾರವನ್ನು ತಿಳಿದುಕೊಂಡ ಆರೋಪಿಗಳು ಕಲ್ಬುರ್ಗಿ ಅವರನ್ನು ಕ್ಷಾತ್ರಧರ್ಮ ಸಾಧನ ಪುಸ್ತಕದಲ್ಲಿ ತಿಳಿಸಿರುವಂತೆ 'ದುರ್ಜನರು' ಎಂದು ಪರಿಗಣಿಸಿ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದರು. 

ಬಳಿಕ 2015 ಜನವರಿ-ಮೇ ತಿಂಗಳಲ್ಲಿ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಪ್ರಕಾಶ್ ಚತುರ್ ಇವರು ಅನೇಕ ಬಾರಿ ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆ ಉದ್ಯಾನವನದಲ್ಲಿ ಕಲ್ಬುಗರ್ಿ ಅವರನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡುವ ಬಗ್ಗೆ ಸಂಚು  ರೂಪಿಸಿದ್ದರು.  

ಅಮೋಲ್ ಕಾಳೆ, ಗಣೇಶ್ ಇವರಿಬ್ಬರು ಕಲ್ಬುರ್ಗಿ ಅವರ ಚಲನವಲನಗಳ ಬಗ್ಗೆ ಸಮೀಕ್ಷೆ ಮಾಡುವಂತೆ ವಾಸುದೇವ್ ಭಗವಾನ್ ಸೂರ್ಯವಂಶಿಗೆ ಸೂಚಿಸಿ, ಮೋಟಾರ್ ಬೈಕ್ ಕಳ್ಳತನ ಮಾಡಿ ಗಣೇಶ್ ಗೆ ನೀಡುವಂತೆ ಸೂಚಿಸಿದ್ದರು. ಹುಬ್ಬಳ್ಳಿಯಲ್ಲಿ ಒಂದು ಬಜಾಜ್ ಡಿಸ್ಕವರ್ ಮೋಟಾರ್ ಬೈಕನ್ನು ಕಳ್ಳತನ ಮಾಡಿ ಕಲ್ಬುರ್ಗಿ ಅವರ ಚಲನವಲನಗಳ ವರದಿಯನ್ನು ಕಾಳೆಗೆ ಇವರು ನೀಡಿದ್ದರು.  

2015 ರ ಆಗಸ್ಟ್ ನಲ್ಲಿ ಅಮೋಲ್ ಕಾಳೆ, ಗಣೇಶ್ ಹಾಗೂ ಪ್ರವೀಣ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪಿತಾತಬೆಟ್ಟು ಗ್ರಾಮದಲ್ಲಿನ ರಬ್ಬರ್ ತೋಟವೊಂದರಲ್ಲಿ ನಾಡಪಿಸ್ತೂಲ್ ನಿಂದ ಗುಂಡು ಹಾರಿಸುವ ತರಬೇತಿ ನೀಡಿ, ಆಗಸ್ಟ್ 2 ನೇ ವಾರದಲ್ಲಿ ಕಲ್ಬುರ್ಗಿಅವರ ಹತ್ಯೆ ಮಾಡಲು ಅಂತಿಮ ಸಿದ್ಧತೆ ಮಾಡಿಕೊಂಡಿದ್ದರು.  

ಆಗಸ್ಟ್ 30, 2015 ರ ಬೆಳಿಗ್ಗೆ ಸುಮಾರು 7 ಗಂಟೆಗೆ ಅಮೋಲ್ ಕಾಳೆ ಬಜಾಜ್ ಡಿಸ್ಕವರಿ ಬೈಕನ್ನು ಪ್ರವೀಣ್ ಗೆ ನೀಡಿ, ಗಣೇಶ್ ಗೆ ಜೀವಂತ ಗುಂಡುಗಳು ತುಂಬಿದ್ದ 7.65 ಎಂಎಂ ಕ್ಯಾಲಿಬರ್ ನ ನಾಡ ಪಿಸ್ತೂಲ್ ಇದ್ದ ಚೀಲವೊಂದನ್ನು ನೀಡಿದ್ದ. 

ಕಲ್ಬುರ್ಗಿ ಅವರ ಮನೆಗೆ ಬೆಳಿಗ್ಗೆ 8.30 ಕ್ಕೆ ಹೋದ ಗಣೇಶ್, ಕಲ್ಬುರ್ಗಿ ಅವರ ಹಣೆಗೆ ಪಿಸ್ತೂಲಿನಿಂದ ಎರಡು ಗುಂಡು ಹಾರಿಸಿ ಹತ್ಯೆ ಮಾಡಿ ಪ್ರವೀಣ್ ಜೊತೆ ಬೈಕಿನಲ್ಲಿ ಪರಾರಿಯಾಗಿದ್ದ. 

ಈ ಆರು ಆರೋಪಿಗಳ ವಿರುದ್ಧ ಕಲಂ 120(ಬಿ), 109, 449, 302, 201 ಮತ್ತು 35 ಭಾರತೀಯ ದಂಡ ಸಂಹಿತೆ ಮತ್ತು ಕಲಂ 25(1ಎ), 25(1ಬಿ), 27(1) ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ರೀತ್ಯ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ.