ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜುಗೌಡ

ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜುಗೌಡ MLA Rajugowda performs Bhoomi Puja for construction of school room

                    ದೇವರಹಿಪ್ಪರಗಿ 29: ಇಂದಿನ ಮಕ್ಕಳೇ ನಾಳಿನ ನಾಗರಿಕರು ಮಾತ್ರವಲ್ಲ, ಮಕ್ಕಳೇ ದೇಶದ ಸಂಪತ್ತು, ಮಕ್ಕಳ ಸರ್ವಾಂಗೀಣ ವಿಕಾಸ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಿಳಿಸಿದರು.ತಾಲೂಕಿನ ಯಲಗೋಡ ತಾಂಡಾ ಗ್ರಾಮದ 2024-25ನೇ ಸಾಲಿನ ಶಿಕ್ಷಣ ಇಲಾಖೆ ಯೋಜನೆ ಅಡಿಯಲ್ಲಿ ಸುಮಾರು 14.15 ಲಕ್ಷ ರೂ, ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು.ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲೆ ಕಟ್ಟಡದ ಕೊರತೆ ನೀಗಿಸುವ ಭಾಗ್ಯ ಇದೀಗ ಒದಗಿ ಬಂದಿದೆ.

                   ಗ್ರಾಮದ ಜನತೆಯ ಕನಸು ನನಸಾದಂತಾಗಿದೆ. ಕ್ಷೇತ್ರದ ಶೈಕ್ಷಣಿಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನಿರಂತರ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪಾಲಕರು, ಶಿಕ್ಷಕರು ಮುತುವರ್ಜಿ ವಹಿಸಬೇಕು. ಸುಮಾರು 14.15 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿ ನಿರ್ಮಾಣವಾಗಲಿವೆ. ಸಕಾಲದಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಹಾಗೂ ಗ್ರಾಮಸ್ಥರ ಬೇಡಿಕೆಗಳಾದ  ಹನುಮಾನ ದೇವಸ್ಥಾನಕ್ಕೆ 5ಲಕ್ಷ ಅನುದಾನ, ಡವಳಾರ ರಸ್ತೆ, ಶಾಲಾ ಕೊಠಡಿಗಳು ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಲಾಗಿದ್ದು.

                     ಈ ಭಾಗದ ಪ್ರಮುಖ ಬೇಡಿಕೆಯಾದ ಯಲಗೂಡ ಗ್ರಾಮದ ನಿಂಗಯ್ಯ ಮುತ್ಯರೆ ಮಠಕ್ಕೆ ಶೀಘ್ರದಲ್ಲಿ ಸುಮಾರು 20 ಲಕ್ಷ ರೂ ವೆಚ್ಚದ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಈ ಭಾಗದ ಕೆಲವು ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಗ್ರಾಮಸ್ಥರ ಬೇಡಿಕೆಗಳನ್ನು ಹಂತ ಹಂತವಾಗಿ ಅನುದಾನ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು.ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ, ಜೆಡಿಎಸ್ ಜಿಲ್ಲಾ ಮುಖಂಡರಾದ ಶೇಖರಗೌಡ ಪಾಟೀಲ ಅವರು ಮಾತನಾಡಿ, ವಿರೋಧ ಪಕ್ಷದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು, ವಿವಿಧ ಇಲಾಖೆಯ ಸಚಿವರನ್ನು ಭೇಟಿಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುದಾನವನ್ನು ತರುತ್ತಿದ್ದಾರೆ,

                    ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ, ವಿಜಯಪುರ ಜಿಲ್ಲೆಯ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ. ಸರ್ಕಾರ ಈಗಲಾದರೂ ಮಲತಾಯಿ ಧೋರಣೆ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಶಾಕಸಾಬ ಚೌದ್ರಿ, ಉಮೇಶ ಇಂಗಳಗಿ, ನಿತ್ಯಾನಂದ ಕತ್ತಿ, ನಜೀರಪಟೇಲ ಕಣಮೇಶ್ವರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.ಫೋಟೋ 29ಡಿಎಚಪಿ1