ಸಂತೆ ಮಾರುಕಟ್ಟೆ-ವಾಣಿಜ್ಯ ಮಳಿಗೆ ಕಟ್ಟಡಕ್ಕೆ ಶಾಸಕ ರಾಜುಗೌಡ ಶಂಕುಸ್ಥಾಪನೆ

ಸಂತೆ ಮಾರುಕಟ್ಟೆ-ವಾಣಿಜ್ಯ ಮಳಿಗೆ ಕಟ್ಟಡಕ್ಕೆ ಶಾಸಕ ರಾಜುಗೌಡ ಶಂಕುಸ್ಥಾಪನೆ MLA Rajugowda laid the foundation stone for Market-Commercial Shop building

ತಾಳಿಕೋಟೆ 10: ಗ್ರಾಮದ ಸುಧಾರಣೆಯಿಂದ ಜನರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದೇನೆ ಇದು ಮಾದರಿಯಾಗಿ ಕೆಲಸವಾಗಬೇಕು. ಗ್ರಾಮದ ಅಭಿವೃದ್ಧಿಗೆ ನೆರವಾಗಬೇಕು ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಬೀಮನಗೌಡ(ರಾಜುಗೌಡ) ಬ.ಪಾಟೀಲ ಹೇಳಿದರು. 

ಅವರು ತಾಲ್ಲೂಕಿನ ಕಲಕೇರಿ ಗ್ರಾಮದ ಮುಖ್ಯಬಜಾರದಲ್ಲಿ 40ಲಕ್ಷ ವೆಚ್ಚದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿ ಬುಧವಾರ ಮಾತನಾಡಿದರು.ಈ ಹಿಂದೆ ಇಲ್ಲಿ ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ನೂತನ ಮಾರುಕಟ್ಟೆಯಲ್ಲಿ ಮೊದಲ ಅದ್ಯತೆ ನೀಡಬೇಕು. ಯಾರಿಗೂ ಅನ್ಯಾಯವಾಗಬಾರದು. ಸಾಮಾಜಿಕ ನ್ಯಾಯ ಸಿಗುವಂತೆ ಎಲ್ಲರೂ ಹೆಮ್ಮೆಪಡುವಂತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಇದೇ ಡಿಸೆಂಬರ್ ಗೆ ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಲಿದೆ ಅವಧಿಯೊಳಗೆ ಈ ಕೆಲಸ ಮಾಡಿ, ಶಾಸಕನಾಗಿ ನನ್ನ ಶಕ್ತಿಮೀರಿ ಸಹಕಾರ ನೀಡುವೆನೆಂದು ಭರವಸೆ ನೀಡಿದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ), ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ವಿವಿಧ ಪಕ್ಷದವರಾಗಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರೆಲ್ಲ ಒಗ್ಗಟ್ಟಾಗಿ ನಿಂತಿರುವುದನ್ನು ನಾನು ಕಲಕೇರಿಯಲ್ಲಿ ನೋಡುತ್ತಿರುವೆ. ರಾಜ್ಯ ಸರ್ಕಾರದಿಂದ ಸಾಧ್ಯವಾದಷ್ಟು ಅನುದಾನವನ್ನು ಒದಗಿಸುವ ಕೆಲಸ ಮಾಡುವೆ. ತಾವುಗಳು ಕೇಂದ್ರದಿಂದ ಅನುದಾನಕ್ಕೆ ಸಂಸದರನ್ನೂ ಭೇಟಿಯಾಗುವಂತೆ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಲಕೇರಿ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಸದಸ್ಯರೆಲ್ಲ ಒಗ್ಗಟ್ಟಾಗಿ ನಿಂತಿರುವುದು ಸಂತಸ, ಹೆಮ್ಮೆ ತಂದಿದೆ ಎಂದರು.ಕಲಕೇರಿ ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಮಡಿವಾಳೇಶ್ವರ ಶಿವಾಚಾರ್ಯರು ಮಾತನಾಡಿ ಕಲಕೇರಿಯಲ್ಲಿ ಮಡಿವಾಳೇಶ್ವರ ದೊಡ್ಡ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಬರಹೋಗುವವರಿಗೆ ಅನುಕೂಲವಾಗುವಂತೆ ಮುಖ್ಯ ರಸ್ತೆಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದರು. ಗ್ರಾ.ಪಂ ಸದಸ್ಯ ನಬಿಲಾಲ ನಾಯ್ಕೊಡಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮೌಲಾನಾ ನಾಸೀರ ಉಮ್ರಿ ಇನಾಮದಾರ, ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಅಹ್ಮದ ಸಿರಸಗಿ, ತಾಲ್ಲೂಕು ಪಂಚಾಯಿತಿ ಇ.ಓ ನಿಂಗಪ್ಪ ಮಸಳಿ, ಗ್ರಾ.ಪಂ.ಪಿಡಿಓ ಬಿ.ಎಂ.ಸಾಗರ, ಗ್ರಾಮದ ಮುಖಂಡರುಗಳಾದ ರಾಮರಾವ ದೇಶಮುಖ, ದಾವಲಸಾಬ ನಾಯ್ಕೊಡಿ, ಜಹಾಂಗೀರಭಾಷಾ ಸಿರಸಗಿ, ಖಾದರಬಾಶಾ ಇನಾಮದಾರ, ವೀರೇಶ ನಾಡಗೌಡ, ಕಿರಣಕುಮಾರ ದೇಸಾಯಿ, ರಮೇಶ ಹೊಸಮನಿ, ಲಕ್ಕಪ್ಪ ಬಡಿಗೇರ, ಹಣಮಂತ ವಡ್ಡರ, ಪುಂಡಲೀಕ ಚವಾಣ, ಮಾಬುಪಟೇಲ ಮೋಪಗಾರ, ದೇವೀಂದ್ರ ಕಡಕೋಳ, ದೇವೀಂದ್ರ ಜಂಬಗಿ, ಮೇಗು ರಾಠೋಡ, ಮಲಕಾಜಪ್ಪ ಭಜಂತ್ರಿ, ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಈರಗಂಟೆಪ್ಪ ಸ್ವಾಗತಿಸಿ ನಿರ್ವಹಿಸಿದರು.