ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ ಶಾಸಕ ಆರ್‌.ವಿ ದೇಶಪಾಂಡೆ

ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ ಶಾಸಕ ಆರ್‌.ವಿ ದೇಶಪಾಂಡೆ  MLA RV Deshpande inaugurated the new commercial complex

ಲೋಕದರ್ಶನ ವರದಿ 

ದಾಂಡೇಲಿ - ಮಾ. 20:  ದಾಂಡೇಲಿ ನಗರಸಭೆಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸುವ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ನಗರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಾಲೋಚನೆಯೊಂದಿಗೆ ಯೋಜನೆಗಳನ್ನು ಜಾರಿಯಲ್ಲಿ ತರಲಾಗುತ್ತಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಶಾಸಕರು ಆದ ಆರ್‌.ವಿ ದೇಶಪಾಂಡೆ ನುಡಿದರು. ಅವರು ಶುಕ್ರವಾರ ದಾಂಡೇಲಿ ನಗರಸಭೆಯ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ-3 ಯೋಜನೆಯಡಿ ಜೆ.ಎನ್‌.ರಸ್ತೆಯ ನಗರಸಭೆ ವಸತಿಗ್ರಹದ ಸಮೀಪ 4 ಕೋಟಿ  26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ, ವಿಕಲಚೇತನರಿಗೆ ತ್ರಿ ಚಕ್ರವಾಹನಗಳನ್ನು ವಿತರಿಸಿದ ಬಳಿಕ ಮಾತನಾಡಿದರು. 

ನಗರದ ಅಭಿವೃದ್ದಿಯ ಕುರಿತು ಮಾತನಾಡಿದ ಅವರು ದಾಂಡೇಲಿ ಕೇವಲ ಪ್ರವಾಸಿ ಕೇಂದ್ರವಾಗಿಯೇ ಅಲ್ಲ ವ್ಯಾಪಾರ ಹಾಗೂ ಸಾಮಾಜಿಕವಾಗಿ ಕೂಡಾ ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ನೀರು, ಒಳಚರಂಡಿ ಹಾಗೂ ಸ್ವಚ್ಚತಾ ವ್ಯವಸ್ಥೆಗಳನ್ನು ಸುಧಾರಿಸಲು ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಜೀವನ ಮಟ್ಟವನ್ನು ಹೆಚ್ಚಿಸುವದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ನಗರದಲ್ಲಿ ಸಮಗ್ರ ಅಭಿವೃದ್ದಿ ಸಾಧಿಸಲು ಅಧಿಕಾರಿಗಳು ಹಾಗೂ ಜನರ ಸಹಕಾರ ಅತ್ಯಗತ್ಯವೆಂದು ಅವರು ಹೇಳಿದರು.  

     ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಗರದ ಅಭಿವೃದ್ದಿ ಕಾಮಗಾರಿಗಳು ಮತ್ತು ಅನುದಾನದ ವಿವರಣೆ ನೀಡಿದರು. ವೇದಿಕೆಯ ಮೇಲೆ  ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಅಷ್ಪಾಕ್ ಶೇಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಿಯಾಜ್ ಬಾಬು ಸಯ್ಯದ, ತಾಪಂ ಇ.ಓ ಟಿ.ಸಿ. ಹಾದಿಮನಿ, ತಹಶೀಲದಾರ ಶೈಲೆಶ್ ಪರಮಾನಂದ ಅಧಿಕಾರಿಗಳು ಉಪಸ್ಥಿತರಿದ್ದರು.