ಬೆಂಗಳೂರು, ಅ.31: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಮೊದಲ ‘ಡಿಜಿಟಲ್ ಸ್ಟುಡಿಯೋ’ ಅನ್ನು ಬೆಂಗಳೂರಿನಲ್ಲಿ
ಸ್ಥಾಪಿಸಿದೆ. ಇದೊಂದು ವಿನೂತನವಾದ ಶೋರೂಂ ಆಗಿದ್ದು ಇಲ್ಲಿ ಕಾರುಗಳು ಇರುವುದಿಲ್ಲ, ಬದಲಿಗೆ ಹೆಕ್ಟರ್
ಕಾರಿನ ಬಗ್ಗೆ ವಿಶಿಷ್ಟ ದೃಶ್ಯಗಳ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತದೆ.
ಎಂಜಿ ಮೋಟಾರ್ ಇಂಡಿಯಾದ
ಮೊದಲ ‘ಡಿಜಿಟಲ್ ಸ್ಟುಡಿಯೋ’ ಸಾಂಪ್ರದಾಯಿಕ ಆಟೋಮೊಬೈಲ್ ಶೂರೂಂ ಮಾದರಿಯಲ್ಲಿ ಇರುವುದಿಲ್ಲ. ಇದೊಂದು
ಮುಂದಿನ ಪೀಳಿಗೆಯ ಆಟೋಮೊಬೈಲ್ ಚಿಲ್ಲರೆ ಮಾರಾಟಕ್ಕೆ ನಾಂದಿಯಾಗಲಿದೆ. ಸಾಂಪ್ರದಾಯಿಕ ಶೋರೂಂಗಳ ನಿರ್ವಹಣೆ
ಇಂದಿನ ದಿನಗಳಲ್ಲಿ ಬಹಳ ಕಷ್ಟ. ಕಾರಣ ದುಬಾರಿ ಬಾಡಿಗೆ ಜತೆಗೆ ಕಾರುಗಳನ್ನು ಇಡಲು ಜಾಗದ ಕೊರತೆ ಕೂಡ
ಇರುತ್ತದೆ. ಆದರೆ ಈ ಡಿಜಿಟಲ್ ಸ್ಟುಡಿಯೋದಲ್ಲಿ ಈ ಥರದ ಸಮಸ್ಯೆಗಳೇ ಇರುವುದಿಲ್ಲ. ಬಹಳ ಸುಲಭವಾಗಿ
ನಿರ್ವಹಣೆ ಕೂಡ ಮಾಡಬಹುದು ಮತ್ತು ಡಿಜಿಟಲ್ ರೂಪದಲ್ಲಿ ಗ್ರಾಹಕರಿಗೆ ಕಾರುಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.
“ಈ ಮೊದಲ ಡಿಜಿಟಲ್
ಸ್ಟುಡಿಯೋ ಒಂದು ಪೈಲಟ್ ಪ್ರಾಜೆಕ್ಟ್. ಕಾರುಗಳನ್ನು ಶೋರೂಂನಲ್ಲಿ ಇಡದೆ ಭವಿಷ್ಯದ ಆಟೋಮೊಬೈಲ್ ಚಿಲ್ಲರೆ ಮಾರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ
ಪೀಳಿಗೆಗೆ ಈ ಥರದ ಶೋರೂಂಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ನೆಟ್ ವರ್ಕ್ ಮಾಡಲು ಸಹಕಾರಿ ಎನ್ನುವ ವಿಶ್ವಾಸ
ನಮ್ಮದು” ಎಂದು ಮೊದಲ ಡಿಜಿಟಲ್ ಸ್ಟುಡಿಯೋ ಉದ್ಘಾಟಿಸಿದ
ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ
ಹೇಳಿದರು.
ಈ ಒನ್ 3-ಡಿ
(One 3-D) ತಂತ್ರಜ್ಞಾನದ ಅಳವಡಿಕೆಗಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಮುಂಬೈ ಮೂಲದ ಎಸ್ಸೆಂಟ್ರಿಕ್
(Eccentric Engine) ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. “ಎಂಜಿ ಮೋಟಾರ್ ಸಂಸ್ಥೆಯು ತನ್ನ ಮೊದಲ
ಡಿಜಿಟಲ್ ಸ್ಟುಡಿಯೋದಲ್ಲಿ ನಮ್ಮ ಒನ್ 3-ಡಿ ತಂತ್ರಜ್ಞಾನದ ಬಳಕೆ ಮಾಡುತ್ತಿರುವುದು ನಮಗೆ ಉತ್ಸಾಹ
ತಂದಿದೆ. ಎಂಜಿ ಸಂಸ್ಥೆಯ ಜೊತೆಗೆ ಭವಿಷ್ಯದಲ್ಲಿ ಮತ್ತುಷ್ಟು ಕಾರ್ಯನಿರ್ವಹಿಸುವ ಆಸೆ ನಮ್ಮದು” ಎಂದು
ಎಸ್ಸೆಂಟ್ರಿಕ್ ಇಂಜಿನ್ ಸಂಸ್ಥೆಯ ಸಹ ಸಂಸ್ಥಾಪಕ ವರುಣ್ ಶಾ ಹೇಳಿದರು.
ಗ್ರಾಹಕರಿಗಾಗಿ ಎಂಜಿ
ಮೋಟಾರ್ ಇಂಡಿಯಾ ಪ್ರಸ್ತುತ 130 ಕೇಂದ್ರಗಳನ್ನು ಹೊಂದಿದೆ. ಡಿಸೆಂಬರ್ 2019 ರ ಅಂತ್ಯದ ವೇಳೆಗೆ ಈ
ಕೇಂದ್ರಗಳ ಸಂಖ್ಯೆಯನ್ನು 250 ಕ್ಕೆ ಏರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದರು.