ಎಂಎಫ್‌ಎಂ ಮ್ಯೂಚುವಲ್ ಫಂಡ್ನ ‘ನಾರಿ ನಿವೇಶ್ ಯಾತ್ರೆ’

ಎಂಎಫ್‌ಎಂ ಮ್ಯೂಚುವಲ್ ಫಂಡ್ನ ‘ನಾರಿ ನಿವೇಶ್ ಯಾತ್ರೆ’ MFM Mutual Fund’s ‘Nari Nivesh Yatra’

ಲೋಕದರ್ಶನ ವರದಿ 

ಬೆಳಗಾವಿ, ಆ. 27: ಹೂಡಿಕೆದಾರರಲ್ಲಿ ಹಣಕಾಸು ಸಾಕ್ಷರತೆ ಹಾಗೂ ಹೂಡಿಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಎಂಎಫ್‌ಎಂ ಮ್ಯೂಚುವಲ್ ಫಂಡ್ ಕೈಗೊಂಡಿರುವ ರಾಷ್ಟ್ರವ್ಯಾಪಿ ‘ನಾರಿ ನಿವೇಶ್ ಯಾತ್ರೆ’ ಅಭಿಯಾನದ ಬೆಳಗಾವಿ ಹಂತ ಪೂರ್ಣಗೊಂಡಿದೆ.  

ಜೂನ್ 26ರಂದು ಚೆನ್ನೈನಿಂದ ಆರಂಭಗೊಂಡಿರುವ ಈ ಯಾತ್ರೆಯು ವಿವಿಧ ನಗರಗಳು ಹಾಗೂ ಪಟ್ಟಣಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಹೂಡಿಕೆ, ದೀರ್ಘಾವಧಿಯ ಹಣಕಾಸು ಯೋಜನೆ ಮತ್ತು ಹಣಕಾಸು ಸಂಬಂಧಿತ ಯೋಜನೆಗಳ ಕುರಿತು ಅರಿವು ಮೂಡಿಸುತ್ತಿದೆ. ಕುಟುಂಬದ ಮಟ್ಟದಲ್ಲಿ ಹಣಕಾಸು ನಿರ್ಧಾರಗಳು ಹಾಗೂ ಸಂಪತ್ತು ಸೃಷ್ಟಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರನ್ನು ಹೂಡಿಕೆ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.  

ಅಭಿಯಾನದ ಭಾಗವಾಗಿ ಎರಡು ವಾಹನಗಳು ದೇಶದ ಎರಡು ವಿಭಿನ್ನ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದು, ವಿವಿಧ ನಗರಗಳಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಸಂವಾದ, ಮಾಹಿತಿ ಕಾರ್ಯಕ್ರಮಗಳು ಹಾಗೂ ಹೂಡಿಕೆದಾರರ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಬೀದಿ ನಾಟಕಗಳು ಮತ್ತು ಸಂವಾದಗಳ ಮೂಲಕ ಹೂಡಿಕೆ ಹಾಗೂ ಹಣಕಾಸಿನ ವಿಚಾರಗಳನ್ನು ಸರಳವಾಗಿ ಜನರಿಗೆ ತಲುಪಿಸಲಾಗುತ್ತಿದೆ.  

ಬೆಳಗಾವಿ ಹಂತದಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಿ, ವಿವಿಧ ಪ್ರಮುಖ ಸ್ಥಳಗಳಲ್ಲಿ ಹೂಡಿಕೆ ಮತ್ತು ಹಣಕಾಸು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಣಬರ್ಗಿ, ಕಣಬರ್ಗಿ ಮಾರುಕಟ್ಟೆ, ಬೆಳಗಾವಿ ಎಪಿಎಂಸಿ ಮಾರುಕಟ್ಟೆ, ತಿಲಕವಾಡಿ ಮಾರುಕಟ್ಟೆ, ಶಹಾಪುರ ಮಾರುಕಟ್ಟೆ, ಆಂಗೋಳ ಮಾರುಕಟ್ಟೆ ಹಾಗೂ ಖಡೆಬಜಾರ್ ಸೇರಿದಂತೆ ಹಲವು ಪ್ರದೇಶಗಳಿಗೆ ಯಾತ್ರೆ ಭೇಟಿ ನೀಡಿತು.  

ನಗರದ ಮಹಿಳೆಯರೊಂದಿಗೆ ನೇರ ಸಂವಾದ ನಡೆಸಿ, ಹಣಕಾಸಿನ ಯೋಜನೆಗಳು, ಶಿಸ್ತುಬದ್ಧ ಹೂಡಿಕೆ ಮತ್ತು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಕುರಿತು ಮಾಹಿತಿ ನೀಡಲಾಯಿತು. ಮಹಿಳೆಯರೊಂದಿಗೆ ನೇರವಾಗಿ ಮಾತುಕತೆ ನಡೆಸುವುದು ‘ನಾರಿ ನಿವೇಶ್ ಯಾತ್ರೆ’ ಅಭಿಯಾನದ ಪ್ರಮುಖ ಅಂಶವಾಗಿದೆ.