ಸಿಯೋಲ್, ಟೆಹ್ರಾನ್, ಟೋಕ್ಯೋಗಳಿಗೆ ಬೀಜಿಂಗ್ ನಿಂದ ಔಷಧ ಪರಿಕರ
ಬೀಜಿಂಗ್, ಮಾ 13 (ಕ್ಸಿನ್ಹುವಾ) ಇತ್ತೀಚೆಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರಲು ನೆರವಾಗಲು ಸಿಯೋಲ್, ಟೆಹ್ರಾನ್, ಟೋಕಿಯೋ ಮತ್ತು ಯೊಕೊಹಾಮಾಗಳಿಗೆ ಬೀಜಿಂಗ್ ನಗರಸಭೆ ವೈದ್ಯಕೀಯ ಪರಿಕರಗಳ ದಾನ ಮಾಡಲಿದೆ. ಸುಮಾರು ಎರಡು ಲಕ್ಷ ಗೌನ್ ಗಳು, ಒಂದು ಲಕ್ಷ ಜೊತೆ ಗ್ಲೌಸುಗಳು, ಎರಡು ಲಕ್ಷ ಜೊತೆ ಪಾದರಕ್ಷೆ ಕವಚಗಳು ಮೊದಲಾವುಗಳನ್ನು ಈ ನಗರಗಳಿಗೆ ನೀಡಲಾಗುವುದು ಎಂದು ಬೀಜಿಂಗ್ ಆಡಳಿತ ವಿದೇಶಾಂಗ ವ್ಯವಹಾರಗಳ ಕಚೇರಿಯ ಉಪನಿರ್ದೇಶಕ ಲಿ ಯಿ ತಿಳಿಸಿದ್ದಾರೆ. ಹ್ಯಾಂಡ್ ಸ್ಯಾನಿಟೈಸರ್, ನ್ಯೂಕ್ಲಿಕ್ ಆಸಿಡ್ ಪರೀಕ್ಷಾ ಕಿಟ್, ಸ್ಮಾರ್ಟ್ ಥರ್ಮಾಮೀಟರ್, ವೆಂಟಿಲೇಟರ್ ಮೊದಲಾದವುಗಳು ಸಹ ಈ ಪಟ್ಟಿಯಲ್ಲಿ ಸೇರಿವೆ. ಕೊರೊನಾ ಸೋಂಕು ತಡೆಗಟ್ಟಲು ಇಡೀ ವಿಶ್ವದ ಸಹೋದರ ಸಹೋದರಿಯರು ನೀಡಿದ ನೆರವಿಗೆ ಕೃತಜ್ಞರಾಗಿರುವುದಾಗಿ ಸಹ ಲಿ ಹೇಳಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಇದೀಗ ಜಗತ್ತಿನಾದ್ಯಂತ ಹಬ್ಬುತ್ತಿರುವ ಕಾರಣ ಈ ಸೋಂಕಿನ ವಿರುದ್ಧದ ಹೋರಾಟ ನೆರವು ನೀಡಲು ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.