ಮಂಗಳೂರು,ಮಾ.7, ವೈದ್ಯ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಕ್ಕಿಂತ ದೇಶದಲ್ಲೇ ಉತ್ಪಾದನೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ವೈದ್ಯರ ಜ್ಞಾನ ಬಳಸಿಕೊಂಡು, ಕಾರ್ಯ ಪ್ರವೃತ್ತರಾಗೋಣ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಂಡಿಯನ್ ರೇಡಿಯಾಲಜಿಸ್ಟ್ಸ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ (ಐಆರ್ಐಎ) ಮಂಗಳೂರಿನಲ್ಲಿ ಆಯೋಜಿಸಿದ್ದ 36ನೇ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. "ಸುಧಾರಿತ ಆರೋಗ್ಯ ಸೌಲಭ್ಯವಿರದ ಹಳ್ಳಿ, ತಾಲೂಕು ಮಟ್ಟದಲ್ಲಿ ಆನ್ಲೈನ್ ಮೂಲಕವೂ ಉತ್ತಮ ಸೌಲಭ್ಯ ಕೊಡಲು ಸಾಧ್ಯವಾಗದ ಕಾರಣ ಸಮಸ್ಯೆ ಆಗುತ್ತಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳಾಗಬೇಕು. ಆಮದು ಉಪಕರಣಗಳ ಮೇಲೆ ಅವಲಂಬಿತರಾಗುವ ಬದಲು ನಮ್ಮ ದೇಶದಲ್ಲೇ ಅತ್ಯಾಧುನಿಕ ವೈದ್ಯ ಉಪಕರಣಗಳ ಉತ್ಪಾದನೆ ಆಗಬೇಕು.
ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಿಸಲಿರುವ ಆರೋಗ್ಯ ಪಾರ್ಕ್ನಲ್ಲೂ ಈ ನಿಟ್ಟಿನಲ್ಲಿ ಸಂಶೋಧನೆಗಳಾಗಲಿವೆ. ಇದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧ ಎಂದು ಅವರು ಹೇಳಿದರು. "ಉತ್ಪಾದನೆ, ಅನ್ವೇಷಣೆಗಳು ಆರ್ಥಿಕ ವ್ಯವಸ್ಥೆ ಅಭಿವೃದ್ಧಿಗೆ ಪೂರಕ. ಇದರಿಂದಲೇ ಉತ್ತಮ ಭವಿಷ್ಯ, ಸದೃಢ ಆರ್ಥಿಕತೆ ಕಾಣಲು ಸಾಧ್ಯ. ಯಾವುದೇ ಹೊಸ ಆಲೋಚನೆಗಳಿಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಯೋಜನೆ ಮುಂದುವರಿಸಬೇಕು. ಆರ್ಥಿಕ ಸನ್ನಿವೇಶ ಹಾಗೂ ಸುಸ್ಥಿರ ಅಭಿವೃದ್ಧಿಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆವಿಷ್ಕಾರಗಳು ಆಗಬೇಕು. ಹೊಸ ಆಲೋಚನೆಗಳನ್ನು ಸಂಕೋಚವಿಲ್ಲದೇ ಹಂಚಿಕೊಳ್ಳಿ,
ವಿಭಿನ್ನ ಆಲೋಚನೆಗಳಿಂದ ಮಾತ್ರ ಹೊಸದನ್ನು ಕಾಣಲು ಸಾಧ್ಯ,"ಎಂದು ತಿಳಿಸಿದರು. "ಹಣಕಾಸಿನ ಪರಿಸ್ಥಿತಿಯ ಕಾರಣಕ್ಕೆ ಆರೋಗ್ಯ ಸೇವೆಯಲ್ಲಿ ಅಸಮಾನತೆ ಸೃಷ್ಟಿ ಆಗಬಾರದು. ಎಲ್ಲರಿಗೂ ಆರೋಗ್ಯ ಸೇವೆ ದೊರಕುವಂತಾಗಬೇಕು. ಇದರಲ್ಲಿ ಸರ್ಕಾರದ ಜವಾಬ್ದಾರಿಯೂ ಇದ್ದು, ವ್ಯವಸ್ಥೆಯಲ್ಲಿನ ಲೋಪ ಸರಿಪಡಿಲು ವೈದ್ಯ ಸಮೂಹದ ಸಲಹೆ, ಸಹಕಾರ ಬೇಕು. ಸರ್ಕಾರ ಮಾತ್ರ ಅಲ್ಲ ಖಾಸಗಿ ಸಹಭಾಗಿತ್ವದಲ್ಲೂ ಉತ್ತಮ ಸೇವೆ ನೀಡಲು ಸಾಧ್ಯವಿದ್ದು, ಈ ದಿಕ್ಕಿನಲ್ಲಿ ಚಿಂತನೆಗಳಾಗಬೇಕು,"ಎಂದರು. "ಪಿಎನ್ಡಿಟಿ ಕಾಯಿದೆ (ಹೆಣ್ಣು ಭ್ರೂಣ ಲಿಂಗಪತ್ತೆ ತಡೆ ಕಾಯಿದೆ)ಯಲ್ಲಿ ಯಾವುದೇ ರೀತಿಯ ಬದಲಾವಣೆ ಅಗತ್ಯ ಇದ್ದರೆ, ವೈದ್ಯರು ಈ ಸಂಬಂಧ ಸಭೆ ಸೇರಿ ಚರ್ಚಿಸಿ ಸೂಕ್ತ ಸಲಹೆಗಳನ್ನು ಸೂಚಿಸಬಹುದು. ರೋಗಿಗಳ ಸೇವೆಗೆ ಹೆಚ್ಚಿನ ಸಮಯ ಮೀಸಲಿಡುವ ವೈದ್ಯ ಮಿತ್ರರು, ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ವೈದ್ಯ ಸಮೂಹದ ಹಿತೈಷಿ ಹಾಗೂ ಪ್ರತಿನಿಧಿಯಾಗಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ," ಎಂದು ಆಶ್ವಾಸನೆ ನೀಡಿದರು.