ಉಡುಪಿ, ಮಾ ೬ - ದೇಗುಲ ನಗರಿ ಉಡುಪಿಗೆ ಭೇಟಿ ನೀಡುವ ವಿದೇಶಿಯರು ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹೊಂದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಅವರೆಲ್ಲರ ಮಾಹಿತಿ ಒಳಗೊಂಡ ಪಟ್ಟಿಯನ್ನು ಸಿದ್ದಪಡಿಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಸುಧೀರ್ ಚಂದ್ರ ಶುಕ್ರವಾರ ತಿಳಿಸಿದ್ದಾರೆ. ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿ ಸುಧೀರ್ ಚಂದ್ರ, ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ವೆಂಟಿಲೇಟರ್ ಸೌಲಭ್ಯವಿರುವ ಎರಡು ಹಾಸಿಗೆ ಸೇರಿದಂತೆ ಒಟ್ಟು ಐದು ಹಾಸಿಗೆಗಳ ಐಸೋಲೇಷನ್ ಘಟಕ ಸ್ಥಾಪಿಸಲಾಗಿದೆ. ಕುಂದಾಪುರ ಹಾಗೂ ಕಾರ್ಕಳ ತಾಲೊಕು ಆಸ್ಪತ್ರೆಗಳಲ್ಲೂ ಮೂರು ಹಾಸಿಗೆಗಳ ಐಸೋಲೇಷನ್ ವಾರ್ಡ್ ಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾ, ತಾಲ್ಲೊಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.ರೋಗಲಕ್ಷಣಗಳು ಹಾಗೂ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟುವ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಯಾತ್ರಾ ಕೇಂದ್ರಗಳು ಹಾಗೂ ಕಡಲತೀರಗಳಲ್ಲಿ ಜನರಿರುವ ಸ್ಥಳಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ಎಂದು ಡಾ.ಚಂದ್ರ ಹೇಳಿದರು.ಸಾಮಾಜಿಕ ಮಾಧ್ಯಮಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಭಯ ಸೃಷ್ಟಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್ ಓ ಎಚ್ಚರಿಕೆ ನೀಡಿದರು.ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಮಾಸ್ಕ್ ಗಳ ದಾಸ್ತಾನು ಇವೆ ಎಂದು ಸುಧೀರ್ ಚಂದ್ರ ಸ್ಪಷ್ಟಪಡಿಸಿದರು.