ಬೆಂಗಳೂರು, ಫೆ.20, ಕಳೆದ ಮೂರು ದಿನಗಳಿಂದ ಅಧಿವೇಶನದಲ್ಲಿ ಭಾರೀ ಸದ್ದುಗದ್ದಲಕ್ಕೆ ಕಾರಣವಾಗಿರುವ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸರ್ಕಾರ ಮೇಲ್ಮನೆಯಲ್ಲಿ ಸ್ಪಷ್ಟನೆ ನೀಡಿದ್ದು, ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರೂ ಸಮಾಜದಲ್ಲಿ ಹಿಂಸೆ ಹುಟ್ಟುಹಾಕುವ ದುಷ್ಟಕೂಟದ ಫೋರ್ಥ್ ಫ್ರಂಟಿಗೆ ಸೇರಿದವರು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ನಿಯಮ 68ರ ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಸವರಾಜ ಬೊಮ್ಮಾಯಿ, ದುಷ್ಟಶಕ್ತಿಗಳಿಗೆ ಯಾರೂ ಕೂಡ ಬೆಂಬಲಿಸಬಾರದು. ಗೋಲಿಬಾರ್ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಹಾಗೂ ನೌಶಿನ್ ಸಹ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ ಅವರಿಗೆ ಗುಂಡೇಟು ಹಾರಿಸಲಾಗಿದೆ. ಯಾರನ್ನೂ ಕೂಡ ಹಿಂಸಾತ್ಮಕವಾಗಿ ನೋಡುವ ದೃಷ್ಟಿಕೋಣ ನಮ್ಮ ಸರ್ಕಾರದಲ್ಲ ಎಂದು ಹೇಳಿದರು.ಮಂಗಳೂರು ಸೇರಿದಂತೆ ಕೇರಳ, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಕೆಲವು ದುಷ್ಟಶಕ್ತಿಗಳಿವೆ. ಮೈಸೂರು, ಹಾಸನ, ಶಿವಮೊಗ್ಗ ಕೋಮುಗಲಭೆ ಪ್ರಕರಣವನ್ನು ಹಿಂದಿನ ಸರ್ಕಾರ ಹಿಂದೆತೆಗೆದುಕೊಂಡಿದೆ. ಇದರಲ್ಲಿ ಪಿಎಫ್ಐ, ಎಸ್ಡಿಪಿಐನವರೂ ಇದ್ದು ಪ್ರಕರಣ ಹಿಂದೆ ತೆಗೆದುಕೊಂಡಿದ್ದು ಇವರಿಗೆ ಕುಮ್ಮಕ್ಕು ನೀಡಿದಂತಾಯಿತು.
ದುಷ್ಟ ಸಂಘಟನೆಗಳು ಫೋರ್ತ್ ಫ್ರಂಟ್ಗೆ ಬರುವ ಪ್ರಯತ್ನ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸಿನ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಲಾಗಿತ್ತು. ಸರ್ಕಾರ ಯಾರದ್ದೇ ಇರಬಹುದು. ಹಲವಾರು ಕೇಸುಗಳಲ್ಲಿ ಅವರು ಸಿಲುಕುಹಾಕಿಕೊಂಡರೂ ಅವರು ಬೇರೆಬೇರೆ ಹೆಸರುಗಳಲ್ಲಿ ಮತ್ತೆಮತ್ತೆ ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಇದು ಕೋಮುವಾದ ಮೀರಿದ ವಿಷಯ. ಇದೇ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ರಯೋಗವಾಗಿದೆ. ಇದು ಖಂಡಿತ ಹಿಂದೂ-ಮುಸ್ಲಿಂರ ನಡುವಿನ ಸಂಘರ್ಷವಲ್ಲ. ಸಮಾಜದಲ್ಲಿ ಹಿಂಸೆ ಸೃಷ್ಟಿಸಲೆಂದೇ ಪ್ರಚೋದನೇಗಾಗಿ ಮಂಗಳೂರಿನಲ್ಲಿ ಹಿಂಸೆ ನಡೆಸಲಾಗಿದೆ. ಮೃತಪಟ್ಟವರು ಫೋರ್ತ್ ಫ್ರಂಟಿಗೆ ಕೆಲಸ ಮಾಡುತ್ತಿದ್ದರು ಎಂದು ಗುಪ್ತಚರ ಇಲಾಖೆ ಹೇಳಿದೆ ಎಂದರು.ಮಂಗಳೂರಿನಲ್ಲಿ ಹಲವಾರು ಬಾರಿ ಘರ್ಷಣೆ ಗೋಲಿಬಾರ್ ಆಗಿವೆ. 2007ರಲ್ಲಿ ಮುಲ್ಕಿಯಲ್ಲಿ ಕೋಮುವಾದ ಘಟನೆಯಲ್ಲಿ ಗೋಲಿಬಾರ್ ನಡೆದಾಗ ಇಬ್ಬರು ಮೃತಪಟ್ಟಾಗ ನ್ಯಾಯಾಂಗ ತನಿಖೆಯಾಯಿತು, ಆದರೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿಲ್ಲ. ಬೆಂಗಳೂರಿನಲ್ಲಿ 2016ರಲ್ಲಿ ನಡೆದ ಗೋಲಿಬಾರ್ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಆಯಿತು. ಗಾರ್ಮೆಂಟ್ಸ್ ಗೋಲಿಬಾರ್ ನಲ್ಲಿ ಯಾವುದೇ ತನಿಖೆಯಾಗಲಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಕೊಡಗಿನಲ್ಲಿ ಪುಟ್ಟಪ್ಪ ಹತ್ಯೆಯಾದಾಗ ಜ್ಯೂಡಿಷಿಯಲ್ ತನಿಖೆಯಾಗಲಿಲ್ಲ. ಮಾನವ ಹಕ್ಕುಗಳ ಆಯೋಗದ ಸೂಚನೆ ನಿಯಮ ಮೀರಿ ಮಂಗಳೂರು ಗೋಲಿಬಾರ್ ನಲ್ಲಿ ಪೊಲೀಸರು ನಡೆದುಕೊಂಡಿಲ್ಲ. ಮಂಗಳೂರು ಗೋಲಿಬಾರ್ ಜ್ಯೂಡಿಷಿಯಲ್ ಮೇಲ್ವಿಚರಣೆಯಡಿ ಮ್ಯಾಜಿಸ್ಟೇಟ್ ತನಿಖೆ ನಡೆಯುತ್ತಿದೆ. 24 ನೇ ತಾರೀಖಿನಂದು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆಗೆ ಬರಲಿದೆ. ಒಂದು ಮೇಲ್ಮನವಿ ವಜಾ ಆಗಿದೆ. ಜ್ಯೂಡಿಷಿಯಲ್ ಮೇಲ್ವಿಚಾರಣೆ ಇದೆ. ಒಂದು ಸರ್ಕಾರದ ಅವಧಿಯಲ್ಲಿ ಸುಮಾರು 16ನ್ಯಾಯಾಂಗ ತನಿಖೆಗೆ ಪ್ರಕರಣಗಳು ವಹಿಸಲಾಗಿದೆ. ಪ್ರತಿಭಟನೆಯಲ್ಲಿ ಕೇರಳದಿಂದ ಜನರನ್ನು ಕರೆಸಲಾಗಿತ್ತು. 1879 ಫೋನುಗಳು ಸಿಮ್ಗಳು ಕಾಸರಗೋಡಿಗೆ ಸೇರಿದ್ದವು. 373 ಜನರಿಗೆ ಈ ಸಂಬಂಧ ನೊಟೀಸ್ ನೀಡಲಾಗಿದೆ. ಮತ್ತೊಂದು ಬಾರಿ ನೆಹರು ಮೈದಾನದಲ್ಲಿ ಪ್ರತಿಭಟನೆ ಗೆ ತಾವೇ ಮುಸ್ಲಿಂ, ಪಿಎಫ್ಐ ಎಸ್ಎಫ್ಐ ಜೊತೆ ಸಭೆ ನಡೆಸಿ ಅವಕಾಶ ಮಾಡಿಕೊಟ್ಟಿದ್ದೆವು ಎಂದು ಹೇಳಿದರು.ಎಲ್ಲಾ ಸರ್ಕಾರಗಳಲ್ಲಿಯೂ ಗೋಲಿಬಾರ್ ನಡೆದು ನ್ಯಾಯಾಂಗ ತನಿಖೆಯೂ ಆಗಿವೆ.
ನ್ಯಾಯಾಂಗ ತನಿಖೆಯಲ್ಲಿನ ಶಿಫಾರಸನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎನ್ನುವುದನ್ನು ಅವಲೋಕಿಸಬೇಕು. 2014ರಿಂದ ಪ್ರತಿವರ್ಷ ಸುಮಾರು 3೦ ಸಾವಿರ ಅಪರಾಧ ಪ್ರಕರಣಗಳು ದಾಖಲಾಗಿವೆ. ನಮ್ಮ ಸರ್ಕಾರ ಬಂದ ಮೇಲೆ 2019ರಿಂದ 22ಸಾವಿರ ಅಪರಾಧ ಪ್ರಕರಣಗಳು ವರ್ಷಕ್ಕೆ ದಾಖಲಾಗಿವೆ. ಇದನ್ನು ನೋಡಿದರೆ ನಮ್ಮ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಸಿಎಎ ಬಂದ ಮೇಲೆ ಅದನ್ನು ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸೇರಿದಂತೆ ಇದುವರೆಗೂ ಒಟ್ಟು 730 ಪ್ರತಿಭಟನೆಗಳು ನಡೆದಿವೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ. ಗುಲ್ಬರ್ಗಾದಲ್ಲಿಯೂ ಶಾಂತಿಯುತ ಪ್ರತಿಭಟನೆ ನಡೆದಿದೆ. ಮಂಗಳೂರಿನಲ್ಲಿ 6 ಸಿಎಎ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆದಿದ್ದವು. ಪ್ರತಿಭಟನೆ ಸಂವಿಧಾನದ ಹಕ್ಕು. ನಾವು ಸಹ ಪ್ರತಿಭಟನೆ ಹೋರಾಟದಿಂದ ಬಂದವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ- ವಿರೋಧ ಸಹಜ.
ಯಾರನ್ನೂ ತಡೆಯುವ ಪ್ರಶ್ನೆಯೇ ಇಲ್ಲ. ಒಂದೊಂದು ಸಂದರ್ಭ ಒಂದೊಂದು ರೀತಿಯದ್ದು ಎಂದು ಸಮರ್ಥನೆ ನೀಡಿದರು.144 ನಿಷೇಧಾಜ್ಞೆ ಹಾಗೂ ಗೋಲಿಬಾರ್ ಸಂದರ್ಭ ವಿವರಿಸಿದ ಬಸವರಾಜ ಬೊಮ್ಮಾಯಿ, ಮಂಗಳೂರು ಕರಾವಳಿ ಭಾಗದ ಸೂಕ್ಷ್ಮತೆಯನ್ನು ಅರಿತು 144 ನಿಷೇಧಾಜ್ಞೆ ಜಾರಿ ಮಾಡಲಾಯಿತು. ನಿಷೇಧಾಜ್ಞೆ ಜಾರಿ ಸಂಬಂಧ ಎಲ್ಲಾ ಕಡೆಗಳಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರ ಮಾಡಲಾಗಿತ್ತು. ಎಸ್ಡಿಪಿಐನ ರಿಯಾಜಿ ಫರಂಗಿಪೇಟೆ ಪ್ರತಿಭಟನೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಪೊಲೀಸರಲ್ಲ ಸೈನಿಕ ಪಡೆ ಬಂದರೂ ಸಿಎಎ ವಿರುದ್ಧ ಹೋರಾಟ ನಿಲ್ಲಬಾರದೆಂದು ಪ್ರಚೋದನಕಾರಿ ಸಂದೇಶ ಹರಿಬಿಟ್ಟರು. ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೊದಲಿಗೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದರು. 39 ಜನರನ್ನು ದಸ್ತಗಿರಿ ಮಾಡಿ ಬಂಧಿಸಲಾಯಿತು. ಆದರೂ ಪ್ರತಿಭಟನೆ ನಿಲ್ಲಲಿಲ್ಲ. ಪೊಲೀಸ್ ವಾಹನಗಳಿಗೆ ಅಡ್ಡಿಪಡಿಸಿ,ಮುಖಕ್ಕೆ ಬಟ್ಟೆಕಟ್ಟಿಕೊಂಡು ಪೆಟ್ರೋಲ್ ಬಾಂಬ್ ಪ್ರಯೋಗ ಶುರುವಾಯಿತು. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪೆಟ್ರೋಲ್ ಬಾಂಬ್ ಎಸೆದು ಟೈರ್ ಗೆ ಬೆಂಕಿ ಹಚ್ಚಿದಾಗ ಪೊಲೀಸರು ಆಶ್ರುವಾಯು ಪ್ರಯೋಗಿಸಬೇಕಾಯಿತು. ಧ್ವನಿಮುದ್ರಿಕೆಯಲ್ಲಿ ಎಚ್ಚರಿಸಿ 106 ಟಿಯರ್ ಗ್ಯಾಸ್ 47 ರಬ್ಬರ್ ಬುಲೆಟ್ 10 ಗಾಳಿಯಲ್ಲಿ ಗುಂಡು 36 ಎಸ್.ಎಲ್.ಆರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಲಾಯಿತಾದರೂ ಪೂರ್ವನಿಯೋಜಿತ ಗುಂಪೊಂದು ಇದಕ್ಕೆ ಬಗ್ಗಲಿಲ್ಲ. ಹಿಂದಿನ ಮಂಗಳೂರು ಮೇಯರ್ ಅಶ್ರಪ್ ಅವರ ಮನವಿಗೂ ಪ್ರತಿಭಟನಕಾರರು ಬಗ್ಗಲಿಲ್ಲ. ಅಶ್ರಪ್ ಅವರಿಗೂ ಕಲ್ಲೇಟು ಬಿದ್ದಿವೆ. ಕಿಣಿ ಗನ್ ಶಾಪಿಗೆ ನುಗ್ಗುವ ಪ್ರಯತ್ನ ನಡೆಯಿತು.
ಪ್ರಚೋದಿತ ಗುಂಪು ಎಚ್ಚರಿಕೆಗೂ ಬಗ್ಗದೇ ಇದ್ದಾಗ ಗೋಲಿಬಾರ್ ಮಾಡುವ ಸಂದರ್ಭ ತಲೆದೋರಿತು ಎಂದು ಸಮರ್ಥಿಸಿಕೊಂಡರು.ನಿಯಮ 68ರ ಮೇರೆಗೆ ನಡೆದ ಚರ್ಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿ, ಸುಮಾರು 14 ಜನ ಕಾನೂನು ಸುವ್ಯವಸ್ಥೆ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಎನ್ನುವುದು ರಾಜ್ಯದ ಪ್ರಗತಿಗೆ ಮಹತ್ವದ್ದು. ಎಲ್ಲಿ ಶಾಂತಿಯಿದೆಯೋ ಅಲ್ಲಿ ಪ್ರಗತಿಯಿದೆ. ಸಮಾಜದಲ್ಲಿ ಬದಲಾಗುತ್ತಿರುವ ಸ್ಥಿತಿಗತಿ ವ್ಯಕ್ತಿಗಳ ಏರುಪೇರು ಸಾಮಾಜಿಕ ಕ್ಷೋಭೆ ನಿಯಂತ್ರಣ ನಮ್ಮ ಇಲಾಖೆಗೆ ಬರುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಣಯಗಳು ತೆಗೆದುಕೊಳ್ಳಬೇಕು. ಹೈಕೋರ್ಟ್ ಸುಪ್ರೀಂಕೋರ್ಟ್ ಅಡಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವಾರು ಬಂದೊಇಬಸ್ತ್ ಸವಾಲುಗಳನ್ನು 370 ನಿಯಮ ತೆಗದುಹಾಕಿದಾಗ ಅದರ ಪರಿಣಾಮ ರಾಜ್ಯದ ಮೇಲೂ ಆದಾಗ ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದೇವೆ. ಪರ ವಿರೋಧದವರ ನಿಲುವುಗಳಿಗೆ ಸ್ಪಂದಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳಲಾಗಿದೆ. ಅದೇ ರೀತಿ ರಾಮಜನ್ಮಭೂಮಿ ತೀರ್ಪಿನ ಸಂದರ್ಭದಲ್ಲಿ ಶಾಂತಿ ಕಾಪಾಡಲಾಗಿದೆ. ಕರ್ನಾಟಕದ ಜನರಿಗೆ ಹಿಂಸೆ ಬೇಕಿಲ್ಲ. ನಮ್ಮ ಪೊಲೀಸರಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಗೌರವ ಇದೆ. ಎಷ್ಟೇ ಸಮರ್ಥ ಪೊಲೀಸರು ಇದ್ದಾಗಲೂ ಒಮ್ಮೊಮ್ಮೆ ಪರಿಸ್ಥಿತಿ ಕೈಮೀರುತ್ತದೆ. ಗೋಕಾಕ್ ಚಳುವಳಿಯಲ್ಲಿ ರೈತಾಪಿ ಚಳುವಳಿ ಶಾಂತಿಯುತವಾಗಿ ನಡೆದ ರಾಜ್ಯದ ಇತಿಹಾಸ ನಮ್ಮದು. ಹಲವಾರು ಪ್ರಸಂಗಗಳಲ್ಲಿ ಪೋರ್ಸ್ ಬಳಸಿದ ಉದಾಹರಣೆಯೂ ಇದೆ.ಯಾವ ಸಂದರ್ಭದಲ್ಲಿ ಏನಾಗಿತ್ತು ಎನ್ನವುದಕ್ಕಿಂತ ಬಂದಿರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಮುಖ್ಯ ಎಂದರು. ಹುಬ್ಬಳ್ಳಿ ಈದ್ಗಾ ಮೈದಾನ ಧ್ವಜಾರೋಹಣ ಮೇಲ್ಮನೆಯಲ್ಲಿ ಉಲ್ಲೇಖ: ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಸಂಬಂಧ ಆರು ವರ್ಷ ಪ್ರತಿಭಟನೆ ನಡೆದಿವೆ. ಸರ್ಕಾರ ಬದಲಾಗಿ ದೇವೇಗೌಡರ ಸರ್ಕಾರ ಬಂದಿತು.
ಕಾನೂನು ಹೋರಾಟದಲ್ಲಿ ಅಂಜುಮನ್ ಇಸ್ಲಾಂ ವತಿಯಿಂದ ಬಾವುಟ ಹಾರಿಸಿ ಎಂದು ಆರು ವರ್ಷ ನಡೆಯದ ಕೆಲಸವನ್ನು ಕೇವಲ ಆರು ದಿನಗಳಲ್ಲಿ ಶಾಂತಿಯುತವಾಗಿ ಬಗೆಹರಿಸಲಾಯಿತು. ಇದು ದೇವೇಗೌಡರು ಪ್ರಧಾನಿಯಾದಾಗ ಅವರ ಸಾಧನೆಗಳ ಪಟ್ಟಿಯಲ್ಲಿ ಮೊದಲನೇ ಯದ್ದಾಯಿತು ಎಂದು ಹಳೆಯ ಘಟನೆಯನ್ನು ಬಸವರಾಜ ಬೊಮ್ಮಾಯಿ ಸ್ಮರಿಸಿದರು.ಇದಕ್ಕೂ ಮೊದಲು ಮೇಲ್ಮನೆ ಕಲಾಪ ಆರಂಭವಾಗುತ್ತಿದ್ದಂತೆ ಶೂನ್ಯ ವೇಳೆಯಲ್ಲಿ ರಾಜ್ಯ ಸರ್ಕಾರಿ ನಿಗಮ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಜೆಡಿಎಸ್ನ ಶ್ರೀಕಂಠೇಗೌಡ ಹಾಗೂ ಭೋಜೇಗೌಡ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂದು ದೂರಿದರು.ಕಾಂಗ್ರೆಸಿನ ಜಯಮಾಲಾ ಮಾತನಾಡಿ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರಯಾಣಕ್ಕೆ ತೊಂದರೆಯಾಗಿರುವ ಬಗ್ಗೆ, ಅರಣ್ಯ ಇಲಾಖೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವ್ಯವಹಾರ ನಡೆಯುವ ಬಗ್ಗೆ ಅರಣ್ಯ ಸಚಿವರು ಗಮನ ಹರಿಸಬೇಕು ಎಂದು ಸದನದ ಗಮನಕ್ಕೆ ತಂದಾಗ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಭರವಸೆ ನೀಡಿದರು.