ಮೈಸೂರು, ಸೆ 8 ಸಚಿವನಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ, ಪಕ್ಷದ ವರಿಷ್ಠರು ಹಲವು ದೂರದೃಷ್ಟಿಯನ್ನು ಇಟ್ಟುಕೊಂಡು ತಮಗೆ ಅಧಿಕಾರ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಯಾವ ಕಾರಣಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಇದು ಬಯಸದೇ ಬಂದ ಭಾಗ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರ ಚುನಾವಣೆ ಜವಾಬ್ದಾರಿಯ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ, ಹೌದು ತಮಗೆ ಪಶ್ಚಿಮ ಮಹಾರಾಷ್ಟ್ರದ ಚುನಾವಣೆಗೆ ಜವಾಬ್ದಾರಿ ನೀಡಲಾಗಿದೆ. 6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಪ್ರತಿಪಕ್ಷಗಳ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯ ಇಲ್ಲ ಎಂದು ತಿರುಗೇಟು ನೀಡಿದರು.