ರಾಮಲಿಂಗೇಶ್ವರ ರಥೋತ್ಸವದ ಕಳಸ ಅವರೋಹಣ

ರಾಮಲಿಂಗೇಶ್ವರ ರಥೋತ್ಸವದ ಕಳಸ ಅವರೋಹಣ  Lowering of the Kalasha at the Ramalingeshwara Chariot Festival


ಬೀಳಗಿ 10: ತಾಲೂಕಿನ ಕುಂದರಗಿ ಗ್ರಾಮದ   ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮುಕ್ತಾಯಗೊಂಡ ಮೂರನೇ ದಿನವಾದ ಗುರುವಾರ ಸಂಜೆ ಕಳಸ ಅವರೋಹಣ ಕಾರ್ಯಕ್ರಮ ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜೆಗಳು ನಡೆದವು. ಸಂಜೆ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಚರಂತಿ ಮಠದ ಪೂಜ್ಯ ವೀರಸಂಗಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ, ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.

ನಂತರ ಸಂಪ್ರದಾಯಬದ್ಧವಾಗಿ ರಥದ ಮೇಲಿದ್ದ ಕಳಸವನ್ನು ಗ್ರಾಮದ ವಿಶ್ವಕರ್ಮ ಸಮಾಜದ ಯುವಕರು ಸುರಕ್ಷಿತವಾಗಿ ಕೆಳಗಿಳಿಸಿದರು. ಬಳಿಕ ರಾಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮಾಜಗಳ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಬಸವರಾಜ ಖೋತ, ಗುರಯ್ಯ ಬಾರಾಗಣಿ, ಇಸ್ಮಾಯಿಲಸಾಬ್ ಜಮಾದಾರ, ಅಯ್ಯಪ್ಪ ಕುಂಬಾರ, ಈರಯ್ಯ ಮಠಪತಿ, ರಾಚಯ್ಯ ಮಠಪತಿ, ಶಿವಾನಂದ ನಿರಾಕಾರಿ, ಲಕ್ಷ್ಮಣ ಪಾತ್ರೋಟ, ಶಂಕರ ಖೋತ ಸೇರಿದಂತೆ ಹಲವರು ಉಪಸ್ಥಿತರಿದ್ದರು.