ತುಂಟಕವಿ, ಪೋಲಿಕವಿ ಎಂದೇ ಕರೆಯಿಸಿಕೊಳ್ಳುವ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಬಿ.ಆರ್.ಎಲ್. ಅವರ 75ನೆಯ ಜನ್ಮದಿನ. ಕಳೆದ ಆರು ದಶಕಗಳಿಂದ ಅವರು ಕಾವ್ಯರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಅನನ್ಯ ಪ್ರೇಮಕವಿ ಬಿ.ಆರ್.ಲಕ್ಷ್ಮಣ್ರಾವ್ ರವರು ಇವತ್ತಿನ ಎಲ್ಲ ವಯೋಮಾನದವರಿಗೂ ತಮ್ಮ ಚಂದದ ಕವಿತೆಗಳಿಂದ ಪ್ರಖ್ಯಾತರಾಗಿದ್ದಾರೆ.
ಮೂಲತಃ ಬಿ.ಆರ್.ಲಕ್ಷ್ಮಣ್ರಾವ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದವರು. ಅವರು 1946ರ ಸೆಪ್ಟೆಂಬರ್ 9ರಂದು ಜನಿಸಿದರು. ತಂದೆ ಬಿ.ಆರ್ ರಾಜಾರಾವ್, ತಾಯಿ ವೆಂಕಟಲಕ್ಷ್ಮಮ್ಮ. ತಂದೆಯವರು ಸಂಗೀತಾಸಕ್ತರಾಗಿದ್ದು, ವಾದ್ಯ ಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪ್ರಖ್ಯಾತರಾಗಿದ್ದರು. ಅಲ್ಲದೇ ರಾಜಾರಾವ್ರವರು ಚಿಂತಾಮಣಿಯಲ್ಲಿ ಫೋಟೋಗ್ರಾಫರ್ ಆಗಿದ್ದರು. ಲಕ್ಷ್ಮಣ್ರಾವ್ರವರು ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಪ್ರೌಢಶಿಕ್ಷಣವನ್ನು ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಪೂರೈಸಿದರು. ಪ್ರೌಢಶಾಲೆಯಲ್ಲಿ ಅಧ್ಯಾಪಕರಾದ ವೈ.ಎಸ್.ಗುಂಡಪ್ಪ ಅವರು ಕವನಗಳನ್ನು ಚೆನ್ನಾಗಿ ವಿಶ್ಲೇಷಿಸುತ್ತಿದ್ದರು. ಅವರಿಂದ ಲಕ್ಷ್ಮಣರಾವ ಪ್ರಭಾವಿತರಾದರು. ನಂತರ ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ ಪಿಯುಸಿ ಯನ್ನು ವಿಜ್ಞಾನದೊಂದಿಗೆ ತೇರ್ಗಡೆಯಾದರು. ಅವರ ಸಾಹಿತ್ಯದ ಆಸಕ್ತಿಯನ್ನು ಗುರುತಿಸಿ ಬೆಂಗಳೂರಿಗೆ ಕಳುಹಿಸಿದವರೇ ಡಿ.ಆರ್.ಎಮ್ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಸೀತಾರಾಮ್ ಶಾಸ್ತ್ರೀಗಳು. ಹೀಗಾಗಿ ಬಿ.ಆರ್.ಎಲ್ ರವರು 1964ರಲ್ಲಿ ಬಿಎ ಅಧ್ಯಯನಕ್ಕಾಗಿ ಬೆಂಗಳೂರಿನ ಸಕರ್ಾರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಸೇರಿದರು. ಅವರ ಇಚ್ಛೆಯಂತೆ ಕನ್ನಡ ಮೇಜರ್ ಮಾಡಲು ಅವಕಾಶ ದೊರಕಲಿಲ್ಲ. ಆದರೆ ಅವರಿಷ್ಟದಂತೆ ಕನ್ನಡ ಮೇಜರ್ ಸಿಗಲಿಲ್ಲವಾದರೂ ಬಿ.ಆರ್.ಎಲ್ ರವರಿಗೆ ಕವಿ ನಿಸಾರ್ ಅಮ್ಮದ್ ಅವರು ಸಿಕ್ಕರು. ಆಗ ತಾವು ಬರೆದ ಪದ್ಯಗಳನ್ನು ನಿಸಾರ್ ಅಹ್ಮಮದ್ರವರಿಗೆ ಓದಲು ಕೊಟ್ಟರು. ಒಂದು ವಾರ ಕಳೆದ ನಂತರ ಅವರು ಲಕ್ಷ್ಮಣ್ರಾವ್ರವರನ್ನು ಭೇಟಿ ಮಾಡಿ 'ಚೆನ್ನಾಗಿ ಬರೆಯುತ್ತೀಯಾ ಕಣಯ್ಯಾ ಎಂದು ಪ್ರೋತ್ಸಾಹಿಸಿ, ಪಿ. ಲಂಕೇಶ ಅವರನ್ನು ಪರಿಚಯಿಸಿದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಅವರು ಬರೆದ ಹಲವಾರು ಕವನಗಳು ಸಂಕ್ರಮಣ, ಲಹರಿ, ಗೋಕುಲ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಹೀಗಾಗಿ ಸಾಹಿತ್ಯ ದಿಗ್ಗಜರ ಒಡನಾಟದಲ್ಲಿ ಸೇರಿಕೊಂಡರು.
ಆದೇ ಪದವಿ ಮುಗಿದ ಮೇಲೆ ಎಂ.ಎ.ಗೆ ಸೀಟ್ ಸಿಕ್ಕರೂ ಕೌಟುಂಬಿಕ ಜವಬ್ದಾರಿಯಿಂದ ಓದನ್ನೂ ಮುಂದುವರೆಸಲಾಗಲಿಲ್ಲ. ನಂತರ ಲಂಕೇಶ್ರವರು 'ಚಿಂತಾಮಣಿಯಲ್ಲಿದ್ದುಕೊಂಡೇ ಸಾಹಿತ್ಯ ಸಾಧನೆ ಮಾಡು' ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಲಕ್ಷ್ಮಣ್ರಾವ್ರವರು ಚಿಂತಾಮಣಿಯಲ್ಲಿ ಇಂಗ್ಲೀಷ್ ಮೇಷ್ಟ್ರರಾಗಿ ಕೆಲಸಕ್ಕೆ ಸೇರಿಕೊಂಡರು. ಅವರು ಚಿಂತಾಮಣಿಯಲ್ಲಿದ್ದರೂ ಬೆಂಗಳೂರಿಗೆ ತಿಂಗಳಿಗೆ ಎರಡ್ಮೂರು ಬಾರಿಯಾದರೂ ಬಂದು ಹೋಗುತ್ತಿದ್ದರು. ಅಲ್ಲದೇ ಚಿಂತಾಮಣಿಯಲ್ಲಿ ವಿನಾಯಕ ಟ್ಯುಟೋರಿಯಲ್ಸ್ ಪ್ರಾರಂಭಿಸಿದರು. ನಂತರ ಹೆಣ್ಗೋಡಿನ ನೀನಾಸಂನ ಸ್ಪೂತರ್ಿಯಿಂದ ಚಿಂತಾಮಣಿಯಲ್ಲಿ 'ಗೆಳೆಯರ ಬಳಗ' ವೊಂದನ್ನು ಕಟ್ಟಿದರು. ಅವರ ಸಂಪರ್ಕದಲ್ಲಿದ್ದ ಸಾಹಿತಿಗಳು, ಕಲಾವಿದರು ಗೆಳೆಯರ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿ ಚಿಂತಾಮಣಿಯಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಬೆಳೆಸುವಲ್ಲಿ ಯಶಸ್ವಿಯಾದರು.
1968ರ ನಂತರದಲ್ಲಿ ಲಕ್ಷ್ಮಣ್ರಾವ್ರವರು ನವ್ಯ ಸಾಹಿತ್ಯದ ಚಳುವಳಿಯಲ್ಲಿ ಮೊದಲ್ಗೊಂಡು ಚುಟುಕು, ವಿಡಂಬನೆ, ಭಾವಗೀತೆ, ಮುಂತಾದ ಪ್ರಕಾರಗಳಲ್ಲಿ ಕವಿತೆ ಬರೆಯುತ್ತಾ ಮುನ್ನಡೆದರು. 1971ರಲ್ಲಿ ಇವರ ಮೊಟ್ಟಮೊದಲ ಕವನ ಸಂಕಲನ 'ಗೋಪಿ ಮತ್ತು ಗಾಂಡಲೀನ' ಪ್ರಕಟಗೊಂಡಿತು. ಇಲ್ಲಿ ಕವಿತೆಗಳಲ್ಲಿ ಪೋಲಿತನ ಮತ್ತು ತಮಾಷೆಗಳನ್ನು ಬಳಸಿದ್ದರೂ ಅನೇಕ ಕವಿತೆಗಳಲ್ಲಿ ವ್ಯಕ್ತವಾಗಿರುವ ತುಂಟತನದಲ್ಲೂ ಗಟ್ಟಿತನ, ಬದುಕು, ಮತ್ತು ವಿಚಾರವಂತಿಕೆಯಲ್ಲಿನ ಕಲೆಗಾರಿಕೆಯನ್ನು ಕಾಣಬಹುದು. ನಂತರ ಬಂದ ಕವನ ಸಂಕಲನಗಳು ಟುವಟಾರ, ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಗಳ ಮನ್ನಿಸೋ, ಎಡೆ ಮತ್ತು ಇವಳು ನದಿಯಲ್ಲ, ನವನಮೋನ್ಮೇಷ ಮುಂತಾದವುಗಳಾಗಿವೆ. ಜಪಾನಿನ ಹಾಯಕಗಳಂತೆ, ಸಂಸ್ಕೃತದ ಮುಕ್ತಕಗಳಂತೆ ಕಿರಿದರಲ್ಲಿ ಪರಿದನ್ನು ಹೇಳುವ ಹನಿಗವಿತೆಗಳು ಮರು ಮುದ್ರಣಗೊಂಡಿರುವುದು ಜನಪ್ರಿಯತೆಗೆ ಸಾಕ್ಷಿ. ಅಲ್ಲದೇ ಇವರ ವಿನೋದಕವಿತೆಗಳ ಸಂಕಲನ 'ನ-ನಗು ನೀ ನಗು' 1994ರಲ್ಲಿ ಪ್ರಕಟಗೊಂಡಿತು. ಅಲ್ಲದೇ ಜೆಸ್ಟರ್, ಕಬ್ಬೆಕ್ಕು, ನಿರಂತರ, ಪ್ರೀತಿಯ ಬೆಳಕು, ಕಥಾ ಸಂಕಲನಗಳನ್ನು ಹೀಗೊಂದು ಪ್ರೇಮಕಥೆ ಕಾದಂಬರಿಯನ್ನು ಬರಹಗಳ ಸಂಕಲನ 'ಪಡಿಮಿಡಿತ'ಗಳನ್ನು ರಜನೀಶ್ ನಿಜರೂಪ (ಅನುವಾದ), ಭಲೇ ಮಲ್ಲೇಶಿ, ನನಗ್ಯಾಕೋಡೌಟು' ಶೇಮ್ ಶೇಮ್ ರಾಜಾ (ನಾಟಕಗಳು) ಮಣಿಮಾಲೆ (ವ್ಯಕ್ತಿ ಚಿತ್ರ) ಪ್ರಕಟಿಸಿ ಕನ್ನಡ ಸಾರಸ್ವತ ಲೋಕದಲ್ಲಿ ಜನಮಾನಸರಾಗಿದ್ದಾರೆ. 'ಕಾವ್ಯ ಮತ್ತು ಜೀವನಕ್ಕೆ ದಿಕ್ಕದೆಸೆ ತೋರಿಸದವರೇ ಲಂಕೇಶ್ರವರು ಮತ್ತು ವೈ.ಎಸ್.ಕೆ ಯವರು' ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ. ಹಾಗೆಯೇ ಕಾವ್ಯ ಜೀವನದ ಗೆಳೆಯರಾದ ಕವಿ ಎಚ್.ಎಸ್. ವೆಂಕಟೇಶಮೂತರ್ಿ, ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ, ಸುಗಮ ಸಂಗೀತದ ಮಾಂತ್ರಿಕ ಸಿ.ಅಶ್ವತ್ಥ್ ಮತ್ತು ಮೈಸೂರು ಅನಂತಸ್ವಾಮಿ ಅವರನ್ನು ಮನದುಂಬಿ ನೆನಪಿಸಿಕೊಳ್ಳುತ್ತಾರೆ. 1984ರಲ್ಲಿ ಲಕ್ಷ್ಮಣ್ರಾವ್ ರವರ ಗೀತೆಗಳ ಮೊದಲ ಕ್ಯಾಸೆಟ್ 'ಕೆಂಗುಲಾಬಿ' ಬಿಡುಗಡೆಯಾಯಿತು.ನಂತರದಲ್ಲಿ ಸಿ.ಅಶ್ವತ್ಥ್ ರವರು ಅವರ ಹಲವಾರು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದರು. ಹೀಗಾಗಿ 1987ರಲ್ಲಿ ಅಶ್ವತ್ಥ್ರವರ ರಾಗ ಸಂಯೋಜನೆಯಲ್ಲಿ 'ಸುಬ್ಬಾ ಭಟ್ಟರ ಮಗಳೇ' ಕ್ಯಾಸೆಟ್ ಹೊರಬಂದಿತು. ಹಲವಾರು ರೀತಿಯಲ್ಲಿ ಕ್ಯಾಸೆಟ್ ದಾಖಲೆಯಾಯಿತು. ಲಹರಿ ಕಂಪನಿಯವರು 1ಲಕ್ಷ ಕ್ಯಾಸೆಟ್ ಮಾರಾಟ ಮಾಡಿ ಪ್ರಸಿದ್ಧರಾದರು. 'ಬಾ ಮಳೆಯೇ ಬಾ', 'ಸುಬ್ಬಾಭಟ್ಟರ ಮಗಳೇ', 'ಅಮ್ಮ ನಿನ್ನ ಎದೆಯಾಳದಲ್ಲಿ ಮುಂತಾದ ಭಾವಗೀತೆಗಳಿಂದ ಪ್ರೀತಿಯ ಕವಿಯಾಗಿರುವ ಬಿ.ಆರ್.ಲಕ್ಷ್ಮಣ್ರಾವ್ ವಿಮರ್ಶಕರ ಮನವನ್ನೂ ಗೆದ್ದಿದ್ದಾರೆ.
ಇವರ ಹಲವಾರು ಗೀತೆಗಳನ್ನು ಚಲನಚಿತ್ರ ಹಾಗೂ ದೂರದರ್ಶನ ಧಾರವಾಹಿಗಳಿಗೆ ಬಳಸಿಕೊಳ್ಳಲಾಗಿದೆ. ಬಿ.ಆರ್. ಲಕ್ಷ್ಮಣ್ರಾವ್ ರವರ ಕವನಗಳು ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು, ಓರಿಯಾ, ಬಂಗಾಳಿ, ಕಾಶ್ಮೀರಿ ಮುಂತಾದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೇ ಇವರ ಕೆಲವು ಕವನಗಳನ್ನು ಶಾಲಾ ಮತ್ತು ಕಾಲೇಜು ಪಠ್ಯಗಳಲ್ಲಿ ಅಳವಡಿಸಲಾಗಿದೆ. ಅವರು ಅಮೇರಿಕಾ, ಸಿಂಗಾಪುರ, ಇಂಗ್ಲೆಂಡ್ ಮುಂತಾದ ದೇಶಗಳ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಅವರು 2006ರಲ್ಲಿ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2010ರಲ್ಲಿ ಅಮೇರಿಕದ ನ್ಯೂಜೆಸರ್ಿಯ ಅಕ್ಕ ಸಾಹಿತ್ಯ ಸಮ್ಮೇಳನದಲ್ಲಿ, 2013ರಲ್ಲಿ ಸಿಂಗಾಪುರ ಮತ್ತು ಕತಾರದಲ್ಲಿ ಹಾಗೂ 2015ರ ಮಾರ್ಚನಲ್ಲಿ ಯು.ಕೆ. ಲಿವರ್ಫೂಲ್ನಲ್ಲಿ ನಡೆದ ಉತ್ಸವದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆಗೆ ನಾಡಿನ ಸಂಘ-ಸಂಸ್ಥೆಗಳು ಕವಿ ಬಿ.ಆರ್.ಲಕ್ಷ್ಮಣ್ರಾವ್ರನ್ನು ಸನ್ಮಾಸಿಸಿ ಗೌರವಿಸಿವೆೆ. ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ. ಪು.ತಿ.ನ ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಸಾಹಿತ್ಯ ರತ್ನ ಪ್ರಶಸ್ತಿ, ನಕ್ಷತ್ರ ಪ್ರಶಸ್ತಿ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2006ರಲ್ಲಿ ಅಭಿಮಾನಿಗಳು, ಗೆಳೆಯರು ಸೇರಿ 'ಚಿಂತಾಮಣಿ' ಅಭಿನಂದನ ಗ್ರಂಥ ಪ್ರಕಟಿಸಿ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿನ ಮನೆಯಲ್ಲಿ ಹುಮ್ಮಸ್ಸಿನ ಪ್ರೇಮದ ಕವಿ ಬಿ.ಆರ್.ಲಕ್ಷ್ಮಣ್ರಾವ್ರವರು ಪತ್ನಿ ಗಿರಿಜಾ ಮತ್ತು ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ. ಅವರಿಗೆ ಇಬ್ಬರೂ ಮಕ್ಕಳು. ಒಬ್ಬರು ನೇತ್ರ ತಜ್ಞರು, ಮತ್ತೊಬ್ಬರು ಸ್ವಾಪ್ಟವೇರ್ ಇಂಜನೀಯರ್. ಕವಿ ಬಿ.ಆರ್.ಲಕ್ಷ್ಮಣರಾವ್ ಅವರೊಂದಿಗೆ ಕೆಲಕಾಲ ಕಳೆಯುವ ಭಾಗ್ಯ ನಮ್ಮದಾಗಿತ್ತು. ಪತ್ನಿ ಪ್ರಾಂಶುಪಾಲೆ ಡಾ.ರಾಜಶ್ರೀಯೊಂದಿಗೆ ಸವದತ್ತಿಯ ಎಲ್ಲಮ್ಮ ಕ್ಷೇತ್ರಕ್ಕೆ ಹೋಗಿ ಬಂದಿದ್ದೆ. ರಾಮದುರ್ಗದ ಬೆಂಬಳಗಿ ಪದವಿ ಕಾಲೇಜಿನ ವಾಷರ್ಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರ ವಿಷಯಾಸಕ್ತಿಯಲ್ಲಿ ಯಾವತ್ತೂ ಯಾವುದೇ ಕುಂದಿಲ್ಲ. ಎಲ್ಲ ಸಂಗತಿಗಳ ಬಗೆಗೂ ಅವರಿಗೆ ತೀರದ ಕುತೂಹಲ, ವಿಸ್ಮಯ. ಇಂದಿಗೂ ಕಾವ್ಯ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಕವಿಗೆ ಇಡೀ ಕನ್ನಡ ನಾಡಿನ ಪರವಾಗಿ 'ಶತಮಾನಂ ಭವತಿ' ಎಂದು ಪ್ರಾಥರ್ಿಸುತ್ತೇನೆ. ಈ ಹಲವು ಸವಿಭಾವಗಳೊಂದಿಗೆ ನಮ್ಮ ಪ್ರೀತಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಅವರಿಗೆ ಎಪ್ಪತ್ತೈದನೆಯ ಹುಟ್ಟುಹಬ್ಬದ ಶುಭಾಶಯಗಳು.
ಸಪ್ಟೆಂಬರ್ 11ರಂದು ಬೆಳಿಗ್ಗೆ 10ಗಂಟೆಗೆ ನಲ್ಮೆಯ ಕವಿ ಬಿ. ಆರ್. ಲಕ್ಷ್ಮಣರಾವ್ ಅವರ 75ನೆಯ ಹುಟ್ಟುಹಬ್ಬದ ಸಂಭ್ರಮವು ಉಪಾಸನಾ ಟ್ರಸ್ಟ್ ಅಡಿಯಲ್ಲಿ ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಅಶ್ವತ್ ಕಲಾ ಭವನದಲ್ಲಿ ನಡೆಯಲಿದೆ. ಬಿ.ಆರ್.ಲಕ್ಷ್ಮಣರಾವ್ ಅವರ, 'ಗೋಪಿ ಮತ್ತು ಗಾಂಡಲೀನ 50' ಹೊಸ ಆವೃತ್ತಿ, ಬೆಸ್ಟ್ ಆಫ್ ಬಿ.ಆರ್.ಎಲ್., ಗೆಳೆಯ ಲಕ್ಷ್ಮಣ ಹಾಗೂ ಮನಸ್ಸು ಬಾವಲಿಯಂತೆ ಕೃತಿಗಳು ಬಿಡುಗಡೆಗೊಳ್ಳಲಿವೆ. ಉಪಾಸನಾ ಮೋಹನ, ಪಂಚಮ ಹಳಿಬಂಡಿ, ಮಂಗಳಾರವಿ, ವರ್ಷ ಸುರೇಶ, ಮೇಘನಾ ಭಟ್ ಅವರಿಂದ ಗೀತಗಾಯನ ಹಾಗೂ ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರದವರಿಂದ ನೃತ್ಯ ಕಾರ್ಯಕ್ರಮ ಜರುಗಲಿವೆ.