ಲೋಕದರ್ಶನ ವರದಿರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ : ಸಿ.ಎಸ್ ಷಡಾಕ್ಷರಿ

ಲೋಕದರ್ಶನ ವರದಿರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ : ಸಿ.ಎಸ್ ಷಡಾಕ್ಷರಿ Lokdarshan ReportCentral Model Salary for State Government Employees: C.S. Shadakshari

ಲೋಕದರ್ಶನ ವರದಿರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ : ಸಿ.ಎಸ್ ಷಡಾಕ್ಷರಿ 


ಕಾರವಾರ 18: ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 2026-27 ಅಂತ್ಯದೊಳಗೆ ಕೇಂದ್ರ ವೇತನ ಜಾರಿಗೆ ತರಲು ಸಂಘ ಬದ್ಧವಾಗಿದ್ದು, ಹಬ್ಬದ ಮುಂಗಡವನ್ನು 25ಸಾವಿರದಿಂದ 50 ಸಾವಿರದವರೆಗೆ ಹೆಚ್ಚಳ, ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿಗೆ ತರುವ ಬಗ್ಗೆ ಸಂಘ ಸತತವಾಗಿ ಪ್ರಯತ್ನಿಸುತ್ತಿದ್ದು,  ರಾಜ್ಯದ ನೌಕರರು ನೆಮ್ಮದಿಯಂದ ಇರುವಂತೆ ಮಾಡುವುದು ಸಂಘದ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು.   

ಅವರು ಶನಿವಾರ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಕಾರವಾರ ಜಿಲ್ಲೆ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ರಾಜ್ಯದ ನೌಕರರಿಗೆ ಮಿಲಿಟರಿ ಕ್ಯಾಂಟಿನ್ ಮಾದರಿಯಲ್ಲಿ ಶೇ. 20 ರಿಂದ 25 ರಷ್ಟು ರಿಯಾಯತಿ ದರದಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಎಂಎಸ್‌ಐಎಲ್ ಮುಖಾಂತರ ಕ್ಯಾಂಟಿನ್ ಯೋಜನೆ ರೂಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಜಾರಿಗೆ ತಂದು ನಂತರದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದರು.  

ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ ರೂ.1 ಕೋಟಿ ವಿಮೆ ದೊರೆಯುವ ಸ್ಯಾಲರಿ ಪ್ಯಾಕೇಜ್ ಜಾರಿಗೆ ತರಲಾಗಿದೆ, ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1 ರಿಂದ ಜಾರಿಗೆ ತರಲಾಗಿದ್ದು, ಮೊದಲ ಹಂತದಲ್ಲಿ ಒಳರೋಗಿಗಳಾಗಿ ಹಾಗೂ ಮುಂದಿನ ದಿನಗಳಲ್ಲಿ ಹೊರ ರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗಿದೆ. ಮಹಿಳಾ ನೌಕರರು ತಮ್ಮ ತಂದೆ ತಾಯಿಗಳನ್ನು ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದ್ದು, ಈ ಯೋಜನೆಯ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.  

ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು 1 ರಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವಂತೆ ಕೋರಿದ ಸಂಘದ ಮನವಿಗೆ ಸ್ಪಂದಿಸಿದ ಸರ್ಕಾರವು ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಸರ್ಕಾರ ಹೊರಡಿಸಲಿದ್ದು, ಇದರಿಂದ ರಾಜ್ಯದಲ್ಲಿ 2 ಲಕ್ಷ 25 ಸಾವಿರ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ ಎಂದರು.  

ಪ್ರತಿ ವರ್ಷ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘ ಮಾಡುತ್ತಿದೆ ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು ಮುಂದಿನ ಭವಿಷ್ಯಕ್ಕೆ ಪೂರಕವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡಿದಾಗ ಯಶಸ್ಸು ಹಿಂಬಾಲಿಸಿಕೊಂಡು ಬರುತ್ತದೆ. ಜ್ಞಾನ ಎಂಬುದು ಯಾರ ಸ್ವತ್ತು ಅಲ್ಲಾ ಸರಸ್ವತಿ ಎಲ್ಲರಿಗೂ ಒಲಿಯುತ್ತಾಳೆ. ಸತತ ಪ್ರಯತ್ನವಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. 

ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯ ಸಂಘಟನೆಯಲ್ಲಿ, ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ನೌಕರರ ಬಗ್ಗೆ ಕಳಕಳಿ, ಅಭಿಮಾನ ಇರುವ ಶಾಖೆ ಎಂದರೆ ಉತ್ತರ ಕನ್ನಡ ಜಿಲ್ಲೆ ಎಂಬುದು ಹೆಮ್ಮೆಯ ವಿಷಯ ಎಂದರು. 

 ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ನಗದು ಬಹುಮಾನ, ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಹೆಚ್, ಗೌರವಾಧ್ಯಕ್ಷ ಎಸ್ ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಆರ್ ಮೋಹನಕುಮಾರ್, ಉಪಾಧ್ಯಕ್ಷ ಸದಾನಂದ, ಕಾರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಸಂಜೀವ್ ಕುಮಾರ್ ಎಸ್ ನಾಯ್ಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ಕಿರಣಕುಮಾರ ಹೆಚ್ ನಾಯಕ್,  ಹಾಗೂ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸರ್ಕಾರಿ ನೌಕರರು ಮತ್ತಿತರರು ಇದ್ದರು.