ಲೋಕಾಯುಕ್ತ ಅಧಿಕಾರಿಗಳ ಭೇಟಿ: ಕಡತ ಪರೀಶೀಲನೆ

ಲೋಕಾಯುಕ್ತ ಅಧಿಕಾರಿಗಳ ಭೇಟಿ: ಕಡತ ಪರೀಶೀಲನೆ  Lokayukta officials visit: File review

ತಾಳಿಕೋಟಿ, 12 ; ಪಟ್ಟಣದ ತಾಲೂಕ ಆಡಳಿತದ ವಿವಿಧ ಅಧೀನ ಇಲಾಖೆಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ರೆಡ್ಡಿ ಮತ್ತು ಅವರ ತಂಡದವರು ದಿಢೀರ ಭೇಟಿ ನೀಡಿ ಕಡತಗಳನ್ನು ಪರೀಶೀಲಿಸಿದರು.  

ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ಇಲಾಖೆಯ ಅಧೀನದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ, ನಾಡ ಕಚೇರಿ ಹಾಗೂ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ಕಛೇರಿಯ ಕಡತಗಳನ್ನು ಪರೀಶೀಲಿಸಿದರು. ತಾಲೂಕ ಆಡಳಿತದ ವಿವಿಧ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಒಂದೆಡೆ ಕರೆಸಿ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ತತ್ ಕ್ಷಣ ಸ್ಪಂದಿಸಿ ಪರಿಹಾರ ಒದಗಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.  

ಸ್ಥಳದಲ್ಲಿ ಉಪಸ್ಥಿತ ದೂರುದಾರರಾದ ಸಿದ್ದಾರ್ಥ ಕಟ್ಟಿಮನಿ, ಶಿವಾನಂದ ಪತ್ತಾರ ತುಂಬಗಿ, ಹಾಗೂ ಸುರೇಶ ಕಶಟ್ಟಿ ಮಿಣಜಗಿ ಇವರ ಲಿಖಿತ ದೂರುಗಳನ್ನು ಪಡೆದುಕೊಂಡು ಅವುಗಳ ಪರಿಹಾರಕ್ಕಾಗಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಅವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿ ಅಲ್ಲಿಯ ವಿವಿಧ ವಿಭಾಗಗಳ ಕುರಿತು ಸಮಗ್ರವಾಗಿ ಪರೀಶೀಲನೆ ನಡೆಸಿ ವಾರ್ಡ್ಗಳಿಗೆ ಭೇಟಿ ನೀಡಿದರು.  

ಓಷಧಿ ವಿತರಣಾ ವಿಭಾಗ, ಹಾಜರಾತಿ ಪರೀಶೀಲನೆ, ಅಧಿಕಾರಿಗಳು, ಸಿಬ್ಬಂದಿ ನಗದು ಘೋಷಣಾ ವಹಿವಾಟ ಪರೀಶೀಲಿಸಿದರು. ಇದೇ ವೇಳೆ ಡಯಾಲಿಸಿಸ್ ಸೆಂಟರ್ ಗೆ ಭೇಟಿ ನೀಡಿದ ಅವರು ಅದರಿಂದ ಪ್ರಯೋಜನ ಪಡೆದುಕೊಳ್ಳುತ್ತಿರುವ ರೋಗಿಗಳ ಸಂಖ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಅವರು ಆಸ್ಪತ್ರೆಗೆ ಬರುವ ಸಾರ್ವಜನಿಕರ ಜೊತೆ ಸೌಜನ್ಯದಿಂದ ಹಾಗೂ ಗೌರಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂ.ಡಿ. ಬಡಿಗೇರ, ಸಿಬ್ಬಂದಿಗಳಾದ ಶಂಕರ ಕಟೆ, ಸೌಮ್ಯ ಚಿಮ್ಮಲಗಿ, ಸಂತೋಷ, ಮತ್ತಿತರರು ಇದ್ದರು.