ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಲಾಂಛನ ಬಿಡುಗಡೆ

   ಬೆಂಗಳೂರು, ಸೆ 10    ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಸದಭಿರುಚಿಯ, ಗುಣಮಟ್ಟದ ಚಲನಚಿತ್ರಗಳಿಗೆ ಪತ್ರಕರ್ತರ ವಿಮರ್ಶಿ ಪ್ರಶಸ್ತಿ ಪ್ರದಾನ ಮಾಡುವ ಹಿನ್ನೆಲೆಯಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅಧಿಕೃತವಾಗಿ ಆರಂಭಗೊಂಡಿದೆ. 

   ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ದೇಶಕರ ಸಂಘದ ಅಧ್ಯಕ್ಷ, ಚಲನಚಿತ್ರ ಸಾಹಿತಿ ಡಾ ನಾಗೇಂದ್ರ ಪ್ರಸಾದ್, ಕರುನಾಡ ಚಕ್ರವರ್ತಿ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಲಾಂಛನ ಬಿಡುಗಡೆಗೊಳಿಸುವ ಮೂಲಕ ಅಕಾಡೆಮಿಗೆ ಚಾಲನೆ ನೀಡಿದರು. 

   ಪತ್ರಕರ್ತ ಶ್ಯಾಮ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತರ ಬಹುದಿನದ ಕನಸು ಈ ಮೂಲಕ ನನಸಾಗಿದ್ದು, ಚಂದನವನದಲ್ಲಿ ಅತ್ಯುತ್ತಮ ಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಲನಚಿತ್ರದ 20 ವಿಭಾಗಗಳಿಗೆ ಪ್ರಶಸ್ತಿ ನೀಡುವ ಉದ್ದೇಶವನ್ನು ಅಕಾಡೆಮಿ ಹೊಂದಿದೆ.   

   ವಿಮರ್ಶಾತ್ಮಕ ಪ್ರಶಸ್ತಿ ನೀಡುವ ಉದ್ದೇಶದಿಂದ ಪ್ರಸ್ತುತ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಆರಂಭವಾಗಿದೆ  ಇದಿನ್ನೂ ಮೊದಲ ಹೆಜ್ಜೆ  ಹಿರಿಯ ಪತ್ರಕರ್ತರಾದ ಎ ಎಸ್ ಮೂರ್ತಿ, ವಿಜಯಸಾರಥಿ, ಪಿಜಿಎಸ್ ರವರ ಕಾಲದಲ್ಲಿ ಮಾಡಬೇಕೆಂದುಕೊಂಡಿದ್ದ ಅನೇಕ ಕೆಲಸಗಳು ಹಾಗೆಯೇ ಉಳಿದಿರುವ ಕಾರಣ, ಅವರ ನೆನಪಿನಲ್ಲಿಯೇ ಈ ಕೆಲಸಗಳನ್ನು ಮಾಡಲಾಗುವುದು.  ಮುಂದಿನ ವರ್ಷ ಜನವರಿಯಲ್ಲೇ ಕನ್ನಡ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ಉತ್ತಮ ಚಿತ್ರಗಳಿಗೆ ಲಭ್ಯವಾಗಿದೆ ಎಂದು ಪತ್ರಕರ್ತ ಶ್ಯಾಮ್ ತಿಳಿಸಿದ್ದಾರೆ. 

   ಪ್ರಶಸ್ತಿಯನ್ನು ಕೊಂಡುಕೊಳ್ಳಲಾಗುತ್ತಿದೆ ಎಂಬ ಕೂಗು ಇತ್ತೀಚೆಗೆ ಕೇಳಿಬರುತ್ತಿದ್ದು, ಕೆಲವರು ಪ್ರಶಸ್ತಿಯ ಆಯ್ಕೆಯ ಮಾನದಂಡವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುತ್ತಿರುವುದರಿಂದ, ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಯಾವುದೇ ಮುಲಾಜು, ರಾಜಿಗೆ ಒಳಗಾಗದೆ ಕಟ್ಟುನಿಟ್ಟಿನ ವಿಮರ್ಶಿಯೊಂದಿಗೆ 2019ರಲ್ಲಿ ಬಿಡುಗಡೆಯಾದ ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.