ನವದೆಹಲಿ, ಮೇ 26, ಕೊರೋನಾ ಸೋಂಕು ಪಸರಿಸುವಿಕೆ ತಡೆಯುವಲ್ಲಿ ನಾಲ್ಕು ಹಂತದ ಲಾಕ್‌ಡೌನ್ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದು, ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಲಾಕ್‌ಡೌನ್ ವಿಫಲವಾಗಿದೆ. ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವಾಗ ಲಾಕ್‌ಡೌನ್ ತೆರವುಗೊಳಿಸಿರುವ ಏಕೈಕ ದೇಶ ಭಾರತ ಎಂದು ವ್ಯಂಗ್ಯವಾಡಿದ್ದಾರೆ. ವಿಫಲವಾದ ಲಾಕ್‌ಡೌನ್ ಫಲಿತಾಂಶವನ್ನು ಭಾರತ ಎದುರಿಸುತ್ತಿದೆ. 21 ದಿನಗಳಲ್ಲಿ ಕೋವಿಡ್ -19 ರೋಗವನ್ನು ಬಡಿದೋಡಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಆದರೆ ಅರವತ್ತು ದಿನಗಳ ನಂತರವೂ ಸೋಂಕು ಹೆಚ್ಚುತ್ತಿದೆ. ರೋಗವು ಹೆಚ್ಚಾಗುತ್ತಿರುವಾಗ ಎನ್‌ಡಿಎ ಸರ್ಕಾರ ಏನು ಮಾಡಲು ಯೋಜಿಸುತ್ತಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.ಸರ್ಕಾರವು ಮುಂದೆ ಏನು ಮಾಡಲು ಯೋಜಿಸುತ್ತಿದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕು. ಅಲ್ಲದೆ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಬೇಕು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಹಾಯ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಇತರ ದೇಶಗಳು ನಮ್ಮ ಬಗ್ಗೆ ಏನು ಯೋಚಿಸುತ್ತವೆ ಎಂಬುದರ ಬಗ್ಗೆ ನಾವು ಚಿಂತಿಸಬಾರದು. ನಾವು ದೇಶದ ಆತ್ಮಶಕ್ತಿಯನ್ನು ರಕ್ಷಿಸಬೇಕಾಗಿದೆ "ಎಂದಿರುವ ರಾಹುಲ್, ದಿನಗೂಲಿಗಳು, ವಲಸೆ ಕಾರ್ಮಿಕರ ಹಿತಾಸಕ್ತಿಗಳನ್ನು ಸರ್ಕಾರ ಕಡೆಗಣಿಸಿದೆ. ಕೇಂದ್ರದ ನೆರವಿಲ್ಲದೆ, ಕೊರೋನಾ ಬಿಕ್ಕಟ್ಟು ಎದುರಿಸಲು ರಾಜ್ಯಗಳು ಒಂಟಿಯಾಗಿ ಹೋರಾಡುತ್ತಿವೆ ಎಂದು ಆರೋಪಿಸಿದ್ದಾರೆ.