ಬೆಂಗಳೂರು, ಏ.9,ರಾಜ್ಯದಲ್ಲಿ ಇನ್ನು ಹದಿನೈದು ದಿನಗಳ ಲಾಕ್ ಡೌನ್ ವಿಸ್ತರಣೆಗೆ ಸಲಹೆ ಕೇಳಿ ಬಂದಿದ್ದು ಪ್ರಧಾನಿ ಜೊತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಲಾಕ್ ಡೌನ್ ವಿಸ್ತರಿಸಲು ಸಂಪುಟದ ಎಲ್ಲ ಸದಸ್ಯರು ಒತ್ತಾಯ ಮಾಡಿದ್ದು ಪ್ರಧಾನಿ ಜತೆ ನಾಳೆ ಚರ್ಚಿಸಿದ ಬಳಿಕ ತೀರ್ಮಾನಿಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಮನೆಯಿಂದ ಹೊರ ಬರದೆ ಜತೆ ಸಹಕರಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಬೆಂಗಳೂರಿನಲ್ಲಿ ಲಾಕ್ ಡೌನ್ ಉಲ್ಲಂಘಿಸಿದವರ ಸುಮಾರು 10 ಸಾವಿರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನತೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಕಾನೂನು ಮತ್ತು ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ಶಾಸಕರು, ಸಚಿವರ ಸಂಬಳದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿ 15.36 ಕೋಟಿಯಷ್ಟು ಹಣವನ್ನು ಕೋವಿಡ್ ಪರಿಹಾರ ನಿಧಿಗೆ ವರ್ಗಾಯಿಸಲು ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ
ಜಿಎಸ್ ಟಿ ತೆರಿಗೆ ಪಾವತಿಗೆ ಜೂನ್ ತಿಂಗಳವರೆಗೆ ಕಾಲಾವಕಾಶ ನೀಡಲು, ಕುಡಿಯುವ ನೀರಿಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1ಕೋಟಿ ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ ಬಿಡುಗಡೆ ಸೇರಿದಂತೆ ಇನ್ನು ಕೆಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು. ಈಗಾಗಲೇ ಮಳೆ ಪ್ರಾರಂಭವಾಗಿದ್ದು ರಾಜ್ಯದಲ್ಲಿ ಎಲ್ಲಿಯೂ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ಕೊರತೆ ಆಗದಂತೆ ಕ್ರಮವಹಿಸಿ ಸರಿಯಾದ ರೀತಿಯಲ್ಲಿ ವಿತರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆಯ ಹಾನಿಯಾಗಿದ್ದು ಈ ಬಗ್ಗೆ ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ವಾಸ್ತವಿಕ ಬೆಳೆಹಾನಿಯ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹೊಲದಲ್ಲಿ ಬೆಳೆದಿರುವ ಹೂ ಗಳು ಮಳೆಯಿಂದ ಹಾನಿಯಾಗಿದ್ದು ಈ ಬಗ್ಗೆಯೂ ಜಿಲ್ಲಾಧಿಕಾರಿಯವರಿಂದ ವರದಿಯನ್ನು ಪಡೆದು ಸೂಕ್ತ ಪರಿಹಾರ ನೀಡುವ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಶೇಕಡಾ 50ರಷ್ಟು ಪಡಿತರ ವಿತರಣೆಯನ್ನು ಮಾಡಲಾಗಿದ್ದು, ಇನ್ನುಳಿದ ಪಡಿತರ ವಿತರಣೆಯನ್ನು ಇನ್ನು ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಕೇಂದ್ರ ಸರ್ಕಾರದ ಪಡಿತರ ವ್ಯವಸ್ಥೆಯನ್ನು ಕೂಡಲೇ ವಿತರಿಸಲಾಗುವುದು ಎಂದು ತಿಳಿಸಿದರು.
ಎರಡುವರೆ ಲಕ್ಷ ಕುಟುಂಬದವರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೂ ವಿವಿಧ ಕಾರಣಗಳಿಗೆ ಸಿಕ್ಕಿಲ್ಲವೆಂದು ದೂರು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಹಾಗೂ ಸದ್ಯ ಅವರಿಗೆ ತಾತ್ಕಾಲಿಕವಾಗಿ ಪಡಿತರ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ - 19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇನ್ನು 15 ದಿನಗಳವರೆಗೆ ಲಾಕ್‍ಡೌನ್ ಮುಂದುವರೆಸಬೇಕು ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿಯವರೊಂದಿಗೆ ದಿನಾಂಕ: 11.04.2020ರಂದು ನಡೆಯುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚಿಸಿ ಕ್ರಮ ತೀರ್ಮಾನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.