ಲಾಕ್ಡೌನ್: ಪಾಸ್ಗೆ ಹಣ ಪಡೆಯುತ್ತಿದ್ದವರಿಗೆ ಅಧಿಕಾರಿಗಳಿಂದ ಎಚ್ಚರಿಕೆ

ಕಾರವಾರ 03: ಲಾಕ್ ಡೌನ್ ಸಮಯದಲ್ಲಿ ಪಾಸ್ ಪಡೆದು ಜನರಿಂದ ಹಣ ಪಡೆಯುತ್ತಿದ್ದ ವ್ಯಾಪಾರಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ರಹ್ಮೂರು ಗ್ರಾಮಕ್ಕೆ  ಗುರುವಾರ ಭೇಟಿ ನೀಡಿದ ನೋಡೆಲ್ ಅಧಿಕಾರಿ ಪ್ರವೀಣ ನಾಯ್ಕ ಹಾಗೂ ಮೊಗಟಾ ಗ್ರಾ.ಪಂ. ಪಿಡಿಓ ಸಂದೀಪ ನಾಯ್ಕ ಅವರು ಅಂಗಡಿಕಾರರನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

ಲಾಕ್ ಡೌನ್ ನಿಂದ ಜನರು ಸಂಕಷ್ಟದಲ್ಲಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ಜಿಲ್ಲಾಡಳಿತವು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡರೆ ಪಾಸ್ ರದ್ದು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವೀಣ ನಾಯ್ಕ ಎಚ್ಚರಿಸಿದರು.

'ಪಾರದರ್ಶಕ ಸೇವೆ ನೀಡಲು ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ. ದಿನಸಿಯ ದರಪಟ್ಟಿಯನ್ನೂ ಹಾಕದೇ ಜನರಿಂದ ಬೇಕಾಬಿಟ್ಟಿ ಹಣ ದೋಚಬೇಡಿ. ಪ್ರಾಮಾಣಿಕತೆ ಬೆಳೆಸಿಕೊಳ್ಳಿ. ಕಷ್ಟದ ಪರಿಸ್ಥಿತಿಯಲ್ಲೂ ವೈಯಕ್ತಿಕ ಲಾಭ ನೋಡಬೇಡಿ. ಪ್ರಾಮಾಣಿಕವಾಗಿ ವ್ಯವಹರಿಸಿ' ಎಂದು ಕಿವಿಮಾತು ಹೇಳಿದರು.

ಸಿಇಒ ರೋಷನ್ ಬಗ್ಗೆ ಮೆಚ್ಚುಗೆ: ಗ್ರಾಮದಲ್ಲಿ ದುಪ್ಪಟ್ಟು ದರದಲ್ಲಿ ಅಗತ್ಯ ವಸ್ತುಗಳನ್ನು ಮಾರುತ್ತಿದ್ದ ಬಗ್ಗೆ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೆ ದೂರು ನೀಡಲಾಗಿತ್ತು.  ತಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವ ಬಗ್ಗೆ ತಾಲ್ಲೂಕಾಧಿಕಾರಿಗಳಿಗೆ ಸೂಚಿಸಿದ್ದರು. ಅವರ ಶೀಘ್ರ ಸ್ಪಂದನೆಗೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಭೆ ನಡೆಸಲಾಯಿತು. ಮೊಗಟಾ ಗ್ರಾಮ ಪಂಚಾಯ್ತಿ ಸದಸ್ಯ ಸಂದೇಶ ನಾಯ್ಕ, ಶಾಲಾಭಿವ್ರದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ, ಅಂಗಡಿಕಾರ ಕುಮಾರ ಪಟಗಾರ, ಸುಬ್ರಾಯ ಹೆಗಡೆ, ನೀಲಾಧರ ನಾಯ್ಕ, ಬಾಲಚಂದ್ರ ಪಟಗಾರ, ಶಿವಾನಂದ ನಾಯ್ಕ, ನರಸಿಂಹ ಪಟಗಾರ ಇದ್ದರು.

ವಾಹನ ಬಾಡಿಗೆ ನೀಡುವೆ:

'ಗ್ರಾಮೀಣ ಭಾಗದ ಜನರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ದುಪ್ಪಟ್ಟು ದರ ವಿಧಿಸುವುದು ತಕ್ಷಣವೇ ನಿಲ್ಲಬೇಕು. ಅಗತ್ಯ ಸಾಮಗ್ರಿಗಳನ್ನು ಕುಮಟಾದಿಂದ ತರಲು ಅಂಗಡಿಕಾರರಿಗೆ ವಾಹನದ ಡೀಸೇಲ್ ವೆಚ್ಚವನ್ನು ವೈಯಕ್ತಿಕವಾಗಿ ನೀಡುತ್ತೇನೆ. ಇನ್ನೆರಡು ತಿಂಗಳು ಲಾಕ್ ಡೌನ್ ಮುಂದುವರಿದರೂ ಅಲ್ಲಿಯವರೆಗೆ ಸಾಗಾಟದ ವೆಚ್ಚವನ್ನು ಭರಿಸಲು ಸಿದ್ಧವಿದ್ದೇನೆ. ದಯವಿಟ್ಟು ಮಾರುಕಟ್ಟೆ ದರದಲ್ಲಿಯೇ ಅಗತ್ಯ ಸಾಮಾನುಗಳನ್ನು ಜನರಿಗೆ ಒದಗಿಸಿ' ಎಂದು ಗ್ರಾಮಸ್ಥ ನಾರಾಯಣ ಹೆಗಡೆ ಹೇಳಿದರು.