ಬೆಂಗಳೂರು, ಮೇ 7, ಕೋವಿಡ್-19 ಲಾಕ್‍ಡೌನ್ ಜಾರಿ ಹಿನ್ನೆಲೆ ಸಂಕಷ್ಟದಲ್ಲಿರುವ ಬಡ ವರ್ಗಕ್ಕೆ ರಾಜ್ಯದಲ್ಲಿರುವ ಸುಮಾರು 33 ಸಾವಿರ ವಕ್ಫ್ ಸಂಸ್ಥೆಗಳ ಪೈಕಿ, ಆರ್ಥಿಕವಾಗಿ ಸದೃಢವಾಗಿರುವ ಸಂಸ್ಥೆಗಳು ತಮ್ಮ ಆದಾಯದಲ್ಲಿ ಬಡವರಿಗೆ ನೆರವು ನೀಡುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ. ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಸಂಸ್ಥೆಗಳು ತಮ್ಮಲ್ಲಿ ಲಭ್ಯವಿರುವ ಹೆಚ್ಚುವರಿ ಸಂಪನ್ಮೂಲದಿಂದ ಶೇ.20 ರಿಂದ 30ರವರೆಗೆ ಹಣಕಾಸನ್ನು ಬಳಸಿಕೊಂಡು, ಬಡವರಿಗೆ ರೇಷನ್, ಸಿದ್ಧಪಡಿಸಿದ ಆಹಾರ, ಅಗತ್ಯ ಔಷಧಿಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಆಯಾ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಅರ್ಹ ಬಡವರನ್ನು ಗುರುತಿಸಿ, ಅಗತ್ಯ ಇರುವವರಿಗೆ ನೆರವು ತಲುಪಿಸುವ ಕೆಲಸ ಮಾಡಬೇಕು. ಈ ಕಾರ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ನಿದೇರ್ಶನಗಳು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.ಅತ್ಯಂತ ಪಾರದರ್ಶಕವಾಗಿ ಈ ಕೆಲಸ ಆಗಬೇಕಿದೆ. ಬಡವರಿಗೆ ನೆರವು ಒದಗಿಸುವ ಈ ಕಾರ್ಯದ ಸಂಪೂರ್ಣ ಮಾಹಿತಿಯನ್ನು ಲೆಕ್ಕಪರಿಶೋಧನೆ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಗಮನಕ್ಕೆ ತರಬೇಕು. ವಕ್ಫ್ ಸಂಸ್ಥೆಗಳು ತಮ್ಮ ಜಿಲ್ಲೆಯ ಪರಿಧಿಯಲ್ಲೆ ಈ ಕೆಲಸ ನಿರ್ವಹಿಸಬೇಕು. ಫಲಾನುಭವಿಗಳ ಪಟ್ಟಿಯನ್ನು ಮೊದಲು ಸಿದ್ಧಪಡಿಸಿಕೊಂಡು ಆನಂತರ ನೆರವು ತಲುಪಿಸಬೇಕು. ದಿನನಿತ್ಯದ ಬದುಕಿಗೆ ಅಗತ್ಯವಿರುವ ವಸ್ತುಗಳನ್ನಷ್ಟೆ ನೀಡಬೇಕು ಎಂದು ಅವರು ಹೇಳಿದರು.ನೆರವು ತಲುಪಿಸುವ ವೇಳೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಪಾಸ್‍ಗಳನ್ನು ಪಡೆದುಕೊಳ್ಳಬೇಕು. ಪ್ರತಿಯೊಬ್ಬರಿಗೂ ನೆರವು ತಲುಪುವಂತೆ ನೋಡಿಕೊಳ್ಳಬೇಕು. ಈ ನೆರವು ತಲುಪಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಮುಂಚಿತವಾಗಿ ನೆರವು ತಲುಪಿಸುವ ಸ್ಥಳ, ಪ್ರಮಾಣ, ದಿನಾಂಕ ಹಾಗೂ ಅದಕ್ಕಾಗಿ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಉಪಸ್ಥಿತರಿದ್ದರು.